ಪುತ್ತೂರು ಮಿನಿ ವಿಧಾನ ಸೌಧದೆದುರು ಅಂಬೇಡ್ಕರ್ ಪ್ರತಿಮೆ ಸ್ಥಾಪನೆಗೆ ಆಗ್ರಹ
ದಲಿತರ ಕುಂದುಕೊರತೆಗಳ ಸಭೆ
ಪುತ್ತೂರು, ಮಾ.24: ಪುತ್ತೂರಿನ ಕೇಂದ್ರ ಸ್ಥಾನದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್‌ರ ಪ್ರತಿಮೆಯನ್ನು ಸ್ಥಾಪಿಸುವಂತೆ ಹಲವಾರು ವರ್ಷ ಗಳಿಂದ ದಲಿತ ಸಂಘಟನೆಗಳು ಬೇಡಿಕೆ ಸಲ್ಲಿಸಿದ್ದರೂ ಆಡಳಿತ ವರ್ಗ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಶೀಘ್ರವೇ ಮಿನಿವಿಧಾನ ಸೌಧದ ಮುಂಭಾಗದಲ್ಲಿ ಡಾ.ಅಂಬೇಡ್ಕರ್ ಪ್ರತಿಮೆ ಸ್ಥಾಪಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಇಂದು ಪುತ್ತೂರಿನ ತಾಪಂ ಸಭಾಂಗಣದಲ್ಲಿ ನಡೆದ ದಲಿತ ಕುಂದುಕೊರತೆಗಳ ಸಭೆಯಲ್ಲಿ ಕೇಳಿಬಂತು. ತಹಶೀಲ್ದಾರ್ ಸಣ್ಣರಂಗಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿಷಯ ಪ್ರಸ್ತಾವಿಸಿದ ಸೇಸಪ್ಪನೆಕ್ಕಿಲು, ಅಂಬೇಡ್ಕರ್ ಪ್ರತಿಮೆ ನಿರ್ಮಾಣದ ಬೇಡಿಕೆಯನ್ನು ಹಲವು ವರ್ಷಗಳಿಂದ ದಲಿತ ಕುಂದುಕೊರತೆಗಳ ಸಭೆಯಲ್ಲಿ ಮಂಡಿಸುತ್ತಿದ್ದರೂ ಅದನ್ನು ಕಾರ್ಯಸೂಚಿಗಳಲ್ಲಿ ಪ್ರಸ್ತಾಪಿಸದೆ ನಿರ್ಲಕ್ಷ್ಯ ವಹಿಸಲಾಗುತ್ತಿದೆ ಎಂದು ದೂರಿದರು. ಇದಕ್ಕೆ ಧ್ವನಿಗೂಡಿಸಿದ ದಲಿತ ಸಂಘಟನೆಗಳ ಮುಖಂಡರಾದ ಆನಂದ ಮಿತ್ತಬೈಲ್, ಗಿರಿಧರ ನಾಯ್ಕೆ ಮತ್ತಿತರರು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್, ಅಂಬೇಡ್ಕರ್ ಪ್ರತಿಮೆ ನಿರ್ಮಾಣ ವಿಚಾರ ಸರಕಾರಿ ಮಟ್ಟದಲ್ಲಿ ತೀರ್ಮಾನ ಆಗಬೇಕಾದ ಸಂಗತಿಯಾಗಿದ್ದು, ಈ ಬಗ್ಗೆ ಮನವಿ ನೀಡಿದಲ್ಲಿ ಸರಕಾರಕ್ಕೆ ಕಳುಹಿಸಲಾಗುವುದು ಎಂದರು.
ಅಂಬೇಡ್ಕರ್ ಭವನಕ್ಕೆ ಒತ್ತಾಯ: ಈಗಿನ ಉಪನೋಂದಣಾಧಿಕಾರಿ ಕಚೇರಿಯು ಮಿನಿ ವಿಧಾನಸೌಧಕ್ಕೆ ಸ್ಥಳಾಂತರಗೊಂಡ ಬಳಿಕ ಆ ಜಾಗದಲ್ಲಿ ಅಂಬೇಡ್ಕರ್ ಭವನ ನಿರ್ಮಿಸಬೇಕು. ಈ ಬಗ್ಗೆ ಹಿಂದಿನಿಂದಲೂ ಬೇಡಿಕೆ ಮಂಡಿಸುತ್ತಾ ಬರಲಾಗಿದೆ. ಆದರೆ ಈ ನಡುವೆ ಉಪ ನೋಂದಣಾಧಿಕಾರಿ ಕಚೇರಿ ಸ್ಥಳದ ಪಹಣಿಯನ್ನು ಸರಕಾರಿ ಆಸ್ಪತ್ರೆಗೆ ವರ್ಗಾಯಿಸಲಾಗಿದೆ ಎಂಬ ಮಾಹಿತಿ ಇದೆ ಎಂದು ಆನಂದ ಮಿತ್ತಬೈಲ್ ಆಕ್ರೋಶ ವ್ಯಕ್ತಪಡಿಸಿದರು. ಉಪ ನೋಂದಣಾಧಿಕಾರಿ ಕಚೇರಿ ಸ್ಥಳಾಂತರಗೊಳ್ಳುವವರೆಗೆ ಏನೂ ಹೇಳುವಂತಿಲ್ಲ ಎಂದು ತಹಶೀಲ್ದಾರ್ ಸ್ಪಷ್ಟಪಡಿಸಿದರು. ಡಿಸಿ ಮನ್ನಾ ಭೂಮಿಯನ್ನು ಮಂಜೂರು ಮಾಡುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳನ್ನು ವಿಲೇವಾರಿ ಮಾಡದೆ ವಿಳಂಬ ಮಾಡುತ್ತಿರುವ ಬಗ್ಗೆ ಸಭೆಯಲ್ಲಿ ಆಕ್ರೋಶ ವ್ಯಕ್ತವಾಯಿತು. ಶೀಘ್ರ ಮಂಜೂರು ಮಾಡುವ ಬಗ್ಗೆ ತಹಶೀಲ್ದಾರ್ ಭರವಸೆ ನೀಡಿದರು.
ನೆಟ್ಟಣಿಗೆ ಮುಡ್ನೂರು ಗ್ರಾಪಂ ವ್ಯಾಪ್ತಿಯ ಮಡ್ಯಲಮೂಲೆ, ಓಣಿಯಡ್ಕ ಪರಿಸರದಲ್ಲಿ ಪಂಚಾಯತ್‌ನಿಂದ ಕಟ್ಟಡಕ್ಕೆ ಎನ್‌ಸಿ ಸಿಗದಿದ್ದರೂ ಮದ್ಯದಂಗಡಿ ತೆರೆಯಲು ಯತ್ನಿಸಲಾಗುತ್ತಿದೆ. ಇದನ್ನು ತಡೆಯಬೇಕೆಂದು ರಾಮ ಮೇನಾಲ ಆಗ್ರಹಿಸಿದರು. ಗ್ರಾಪಂ ಎನ್‌ಒಸಿ ನೀಡದ ಕಟ್ಟಡದಲ್ಲಿ ವೈನ್‌ಸ್ಟೋರ್ ತೆರೆಯಲು ಸಾಧ್ಯವಿಲ್ಲ ಎಂದು ತಾಪಂ ಇಒ ಜಗದೀಶ್ ಹೇಳಿದರು.
ಕೊಳ್ತಿಗೆ ಗ್ರಾಮದ ಪಾಲ್ತಾಡಿ ಎಂಬಲ್ಲಿನ ನಿವಾಸಿ ಬೋಜ ಎಂಬವರ ಪುತ್ರ ಬಾಬು ಎಂಬವರಿಗೆ 1.01 ಎಕರೆ ಜಮೀನು ಅಕ್ರಮ - ಸಕ್ರಮದಲ್ಲಿ ಮಂಜೂರಾಗಿದ್ದರೂ, ಇದರ ವಿರುದ್ಧ ಆಕ್ಷೇಪ ಸಲ್ಲಿಸಿದ್ದಾರೆ ಎಂಬ ನೆಪದಲ್ಲಿ ರದ್ದುಪಡಿಸಲಾಗಿದೆ. ಇದರ ಹಿಂದೆ ಅಧಿಕಾರಿಗಳ ಭ್ರಷ್ಟಾಚಾರದ ಸಂಶಯವಿದೆ ಎಂದು ಗಿರಿಧರ ನಾಯ್ಕಾ ಆಪಾದಿಸಿದರು. ಎ.ಸಿ. ಮಟ್ಟದ ಅಧಿಕಾರಿಗಳು ರದ್ದು ಮಾಡಿದ್ದರೆ ಏನೂ ಮಾಡುವಂತಿಲ್ಲ. ಬಡವರಿಗೆ ಅನ್ಯಾಯವಾಗಿದ್ದರೆ ಸಭೆಯಲ್ಲಿ ನಿರ್ಣಯ ಮಾಡಿ ಕಳುಹಿಸೋಣ ಎಂದು ತಹಶೀಲ್ದಾರ್ ನುಡಿದರು.
ಪುತ್ತೂರು ತಾಪಂ ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಎಸ್, ಕಡಬ ವಿಶೇಷ ತಹಶೀಲ್ದಾರ್ ನಿಂಗಯ್ಯ ಉಪಸ್ಥಿತರಿದ್ದರು. ಸಮಾಜ ಕಲ್ಯಾಣ ಅಧಿಕಾರಿ ರಾಮಕೃಷ್ಣ ಭಟ್ ಸ್ವಾಗತಿಸಿ, ನಿರೂಪಿಸಿದರು.









