ಮರಳು ನೀತಿ ವಿರೋಧಿಸಿ ಪುತ್ತೂರಿನಲ್ಲಿ ಪ್ರತಿಭಟನೆ

ಪುತ್ತೂರು, ಮಾ.24: ಸರಕಾರವು ಮರಳಿನ ಮೇಲೆ ಏಕಾಏಕಿ ನಿಯಂತ್ರಣ ಹೇರುವ ಮೂಲಕ ಜನಸಾಮಾನ್ಯರಿಗೆ ಮತ್ತು ಕಟ್ಟಡ ನಿರ್ಮಾಣದಾರರಿಗೆ ಸಮಸ್ಯೆಯನ್ನು ಸೃಷ್ಟಿಸಿದೆ. ಮರಳಿಗೆ ಮುಕ್ತ ನೀತಿ ರೂಪಿಸಿ, ಸಮಸ್ಯೆಯನ್ನು ಪರಿಹರಿಸಬೇಕು ಎಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಂಜೀವ ಮಠಂದೂರು ಆಗ್ರಹಿಸಿದ್ದಾರೆ.
ಪುತ್ತೂರು ತಾಲೂಕು ಲಾರಿ ಚಾಲಕ- ಮಾಲಕರ ಹಾಗೂ ಮರಳು ವ್ಯಾಪಾರಸ್ಥರ ಸಂಘದ ವತಿಯಿಂದ ಗುರುವಾರ ಪುತ್ತೂರಿನ ಮಿನಿವಿಧಾನಸೌಧದ ಮುಂಭಾಗದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಜಿಪಂ ಮಾಜಿ ಅಧ್ಯಕ್ಷೆ ಆಶಾ ತಿಮ್ಮಪ್ಪಮಾತನಾಡಿ, ಮಾನವೀಯ ನೆಲೆಯಲ್ಲಿ ಮರಳುಗಾರಿಕೆಗೆ ತಕ್ಷಣ ಅವಕಾಶ ಕಲ್ಪಿಸಬೇಕು. ಯಾವುದೇ ಕಾರಣಕ್ಕೂ ಮರಳುಗಾರಿಕೆಯನ್ನು ಪಿಡಬ್ಲುಡಿಗೆ ವಹಿಸಬಾರದು. ಈ ಹಿಂದಿನಂತೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಮೂಲಕವೇ ಪರವಾನಿಗೆ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ರಾಕೇಶ್ ರೈ ಕೆಡೆಂಜಿ, ಆರ್.ಸಿ.ನಾರಾಯಣ್, ಸುಧಾಕರ್ ರಾವ್ ಆರ್ಯಾಪು, ಪ್ರಮೀಳಾ ಜನಾರ್ದನ್, ಕನ್ನಡ ಸೇನೆಯ ಚಂದ್ರಶೇಖರ್, ಕೃಷ್ಣಕುಮಾರ್ ರೈ ಗುತ್ತು, ಸವಣೂರು ಗ್ರಾಪಂ ಅಧ್ಯಕ್ಷೆ ಇಂದಿರಾ ಬಿ.ಕೆ, ಗಿರೀಶ್ ಪಡ್ಡಾಯೂರು, ಅರುಣ್ ಕುಮಾರ್ ಪುತ್ತಿಲ ಮತ್ತಿತರರು ಉಪಸ್ಥಿತರಿದ್ದರು. ದಿನೇಶ್ ಮೆದು ಸ್ವಾಗತಿಸಿ, ವಂದಿಸಿದರು.
ಲಾರಿಗಳ ರ್ಯಾಲಿ: ಪ್ರತಿಭಟನೆಗೂ ಮುನ್ನ ಮರಳು ಸಾಗಾಟ ಮಾಡುತ್ತಿರುವ ಸುಮಾರು 250ಕ್ಕೂ ಅಧಿಕ ಲಾರಿಗಳು ದರ್ಬೆಯ ಫಾ. ಪತ್ರವೋ ವೃತ್ತದ ಬಳಿಯಿಂದ ರ್ಯಾಲಿ ಆರಂಭಿಸಿ ಮುಖ್ಯ ರಸ್ತೆಯಲ್ಲಿ ಸಾಗಿ ಕಿಲ್ಲೆ ಮೈದಾನಕ್ಕೆ ಆಗಮಿಸಿದವು. ರ್ಯಾಲಿಗೆ ದರ್ಬೆ ವೃತ್ತದಲ್ಲಿ ಗುತ್ತಿಗೆದಾರ ರಾಧಾಕೃಷ್ಣ ನಾಕ್ ಚಾಲನೆ ನೀಡಿದರು.







