ಹೈದರಾಬಾದ್ ವಿವಿಗೆ ಬೀಗ

♦ ಆವರಣದಲ್ಲಿ ಲಾಠಿ-ಬೂಟುಗಳದೇ ಸದ್ದು ♦ 30ಕ್ಕೂ ಅಧಿಕ ವಿದ್ಯಾರ್ಥಿಗಳು ಆಸ್ಪತ್ರೆಯಲ್ಲಿ; ಹಲವರು ಜೈಲಲ್ಲಿ ♦ ಬರಿ ಹೊಟ್ಟೆಯಲ್ಲಿ 3,500 ವಿದ್ಯಾರ್ಥಿಗಳು ♦ ಇಂಟರ್ನೆಟ್ ಸೌಲಭ್ಯಗಳಿಗೂ ನಿಷೇಧ ♦ ಕ್ಯಾಂಪಸ್ ಪ್ರವೇಶಕ್ಕೆ ಕನ್ಹಯ್ಯಾಗೆ ತಡೆ
ಹೈದರಾಬಾದ್, ಮಾ.24: ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾನಿಲಯ ಅಕ್ಷರಶಃ ರಣರಂಗವಾಗಿ ಪರಿವರ್ತನೆಗೊಂಡಿದೆ. ಸಂಪೂರ್ಣ ಪೊಲೀಸರಿಂದ ಆವೃತವಾಗಿರುವ ವಿಶ್ವವಿದ್ಯಾನಿಲಯವನ್ನು ನಾಲ್ಕು ದಿನಗಳ ಕಾಲ ಮುಚ್ಚುವುದಕ್ಕೆ ನಿರ್ಧರಿಸಲಾಗಿದೆ.
ವಿದ್ಯಾರ್ಥಿಗಳ ಪ್ರತಿಭಟನೆಯನ್ನು ಪೊಲೀಸರು ಸಂಪೂರ್ಣ ದಮನಿಸಿದ್ದು, ಈ ಸಂದರ್ಭದಲ್ಲಿ ಹಲವು ವಿದ್ಯಾರ್ಥಿಗಳು ಗಂಭೀರ ಗಾಯಗೊಂಡಿದ್ದಾರೆ. ಹಲವರು ಜೈಲು ಸೇರಿದ್ದಾರೆ.ಮಂಗಳವಾರ ರಾತ್ರಿಯಿಂದ ಅಧಿಕಾರಿಗಳು ಊಟ, ವಿದ್ಯುತ್, ನೀರು ಹಾಗೂ ಅಂತರ್ಜಾಲ ಸಹಿತ ಎಲ್ಲ ಸೌಲಭ್ಯವನ್ನು ಅಮಾನತುಗೊಳಿಸಿರುವುದರಿಂದಾಗಿ ಕ್ಯಾಂಪಸ್‌ನೊಳಗಿನ ಸ್ಥಿತಿ ಭೀಕರವಾಗಿದೆ. ಇದರಿಂದಾಗಿ 20 ಹಾಸ್ಟೆಲ್‌ಗಳಲ್ಲಿದ್ದ 3,500ರಷ್ಟು ವಿದ್ಯಾರ್ಥಿಗಳು ಕಳೆದ 24 ತಾಸುಗಳಿಂದ ಅನ್ನ- ನೀರಿಲ್ಲದೆ ಅಸಹಾಯಕರಾಗಿದ್ದಾರೆ.
ಜ.17ರಂದು ಆತ್ಮಹತ್ಯೆ ಮಾಡಿಕೊಂಡಿದ್ದ ದಲಿತ ವಿದ್ಯಾರ್ಥಿ ರೋಹಿತ್ ವೇಮುಲಾ ತಾಯಿಗೂ ಆವರಣದೊಳಗೆ ಪ್ರವೇಶ ನಿರಾಕರಿಸಲಾಗಿದೆ. ಗಾಯಗೊಂಡಿರುವ ವಿದ್ಯಾರ್ಥಿಗಳನ್ನು ಭೇಟಿಯಾಗಲು ಕ್ಯಾಂಪಸ್ ಪ್ರವೇಶಕ್ಕೆ ಅಧಿಕಾರಿಗಳು ಅನುಮತಿ ನೀಡದ ಕಾರಣ ರೋಹಿತ್‌ರ ತಾಯಿ ರಾಧಿಕಾ ವೇಮುಲಾ ಧರಣಿ ನಡೆಸಿದ್ದಾರೆ. ಅಪರಾಹ್ನ ತಡವಾಗಿ ಅಲ್ಲಿಗೆ ತಲುಪಿದ್ದ ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾಕುಮಾರ್‌ಗೂ ಕ್ಯಾಂಪಸ್‌ನೊಳಗೆ ಪ್ರವೇಶ ನಿಷೇಧಿಸಲಾಗಿದೆ.
ಕ್ಯಾಂಪಸ್‌ನೊಳಗೆ ಪ್ರದರ್ಶನವೊಂದನ್ನು ನಡೆಸ ಬಯಸಿದ್ದುದಕ್ಕಾಗಿ ರಾಧಿಕಾ ವೇಮುಲಾರಿಗೆ ವಿವಿ ಆವರಣದೊಳಗೆ ಪ್ರವೇಶ ನಿಷೇಧಿಸಲಾಗಿದೆಯೆಂದು ಹೈದರಾಬಾದ್ ವಿವಿಯ ಭದ್ರತಾಧಿಕಾರಿಗಳು ತಿಳಿಸಿದ್ದಾರೆ. ಆದರೆ, ರೋಹಿತ್‌ರ ತಮ್ಮ ರಾಜ ವೇಮುಲಾ ಈ ಆರೋಪವನ್ನು ನಿರಾಕರಿಸಿದ್ದಾರೆ. ತನ್ನ ತಾಯಿ ಕೇವಲ ಗಾಯಗೊಂಡ ವಿದ್ಯಾರ್ಥಿಗಳ ಭೇಟಿಗೆ ಬಯಸಿದ್ದರೆಂದು ಅವರು ಪ್ರತಿಪಾದಿಸಿದ್ದಾರೆ.
ರೋಹಿತ್ ವೇಮುಲಾ ಆತ್ಮಹತ್ಯೆ ಪ್ರಕರಣದಲ್ಲಿ ಹೆಸರಿಸಲಾಗಿರುವ ಉಪಕುಲಪತಿ ಅಪ್ಪಾರಾವ್ ಪೊದಿಲೆ ಮಂಗಳವಾರ ಮತ್ತೆ ಕರ್ತವ್ಯಕ್ಕೆ ಆಗಮಿಸಿದ್ದಾರೆ. ಅದನ್ನು ವಿದ್ಯಾರ್ಥಿಗಳು ಪ್ರತಿಭಟಿಸಿದ ಹಿನ್ನೆಲೆಯಲ್ಲಿ ಹೈದರಾಬಾದ್ ವಿವಿ ಆಡಳಿತವು ಮಾ.26ರವರೆಗೆ ತರಗತಿಗಳನ್ನು ಅಮಾನತುಗೊಳಿಸಿದೆ. ಮಂಗಳವಾರದ ಪ್ರತಿಭಟನೆಯ ವೇಳೆ ಹಿಂಸಾಚಾರ ನಡೆಸಿದುದಕ್ಕಾಗಿ 25 ವಿದ್ಯಾರ್ಥಿಗಳು ಹಾಗೂ ಇಬ್ಬರು ಪ್ರಾಧ್ಯಾಪಕರನ್ನು ಬಂಧಿಸಲಾಗಿದ್ದು, ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ವಿದ್ಯಾರ್ಥಿಗಳು ಹೈದರಾಬಾದ್‌ವಿವಿಯ ಉಪಕುಲಪತಿಯ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಮುಷ್ಕರ ನಿರತ ವಿದ್ಯಾರ್ಥಿಗಳು ಉಪಕುಲಪತಿ ಅಪ್ಪಾರಾವ್ ಪೊಡಿಲೆಯವರ ವಿರುದ್ಧ ಘೊಷಣೆ ಕೂಗಿ, ತಕ್ಷಣವೇ ಅವರನ್ನು ವಜಾಗೊಳಿಸುವಂತೆ ಒತ್ತಾಯಿಸಿದ್ದಾರೆ. ನಿನ್ನೆ ಉಪಕುಲಪತಿಯ ಮನೆಯಲ್ಲಿ ನಡೆಸಿದ ದಾಂಧಲೆ ಹಾಗೂ ಕಲ್ಲು ತೂರಾಟಕ್ಕೆ ಸಂಬಂಧಿಸಿ ಬಂಧಿಸಲಾಗಿರುವ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರನ್ನು ಬಿಡುಗಡೆಗೊಳಿಸಬೇಕೆಂದೂ ಅವರು ಆಗ್ರಹಿಸಿದ್ದಾರೆ.
ಪೊಲೀಸರಿಂದ ಬರ್ಬರ ದೈಹಿಕ, ಲೈಂಗಿಕ ದಾಳಿ: ಹೈದರಾಬಾದ್ ವಿವಿ ವಿದ್ಯಾರ್ಥಿಗಳ ಆರೋಪ
ಹೈದರಾಬಾದ್, ಮಾ.24: ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾನಿಲಯದ ಉಪಕುಲಪತಿ ಪಿ. ಅಪ್ಪಾರಾವ್ ವಿರುದ್ಧ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರಿಂದ ನಡೆದಿದೆಯೆನ್ನಲಾದ ‘ಪೊಲೀಸ್ ದೌರ್ಜನ್ಯ’ ಹಾಗೂ ‘ಲೈಂಗಿಕ ಹಲೆ’್ಲಯನ್ನು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘಟನೆಗಳು ಬಲವಾಗಿ ಖಂಡಿಸಿವೆ.
ಅಡುಗೆ ಮಾಡಲು ಯತ್ನಿಸಿದ ವಿಶ್ವವಿದ್ಯಾನಿಲಯದ ಪಿಹೆಚ್‌ಡಿ ವಿದ್ಯಾರ್ಥಿ ಉದಯ ಭಾನು ಅವರನ್ನು ಪೊಲೀಸರು ಅವರು ಸ್ಮತಿ ತಪ್ಪಿ ಬೀಳುವ ತನಕ ಹೊಡೆದಿದ್ದಾರೆಂದು ಆರೋಪಿಸಲಾಗಿದೆ. ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಲು 14 ಸಂಘಟನೆಗಳನ್ನೊಳಗೊಂಡು ರಚಿಸಲಾದ ಜಂಟಿ ಕ್ರಿಯಾ ಸಮಿತಿಯ ಪ್ರಕಾರ ವಿಶ್ವವಿದ್ಯಾನಿಲಯ ಕ್ಯಾಂಪಸ್‌ನಲ್ಲಿ ತುರ್ತುಪರಿಸ್ಥಿತಿಯಂತಹ ಸನ್ನಿವೇಶವಿದ್ದು ಅಧಿಕಾರಿಗಳು ಹಾಸ್ಟೆಲ್ ಮೆಸ್ ಮುಚ್ಚಿದ್ದರೆ, ನೀರು ಹಾಗೂ ಅಂತರ್ಜಾಲ ಸಂಪರ್ಕವನ್ನು ಕಡಿತಗೊಳಿಸಲಾಗಿದೆ.
ಪೊಲೀಸ್ ಸಿಬ್ಬಂದಿ, ಕ್ಷಿಪ್ರ ಕಾರ್ಯಾಚರಣೆ ಪಡೆ ಹಾಗೂ ಕೇಂದ್ರ ಮೀಸಲು ಪೊಲೀಸ್ ಪಡೆಯ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಮೇಲೆ ಮಂಗಳವಾರ ಲೈಂಗಿಕ ಹಾಗೂ ದೈಹಿಕ ಹಲ್ಲೆ ನಡೆಸಿದ್ದಾರೆಂದು ಜಂಟಿ ಕ್ರಿಯಾ ಸಮಿತಿ ಆರೋಪಿಸಿದೆ.
ತನ್ನ ಫೇಸ್‌ಬುಕ್ ಪುಟದಲ್ಲಿ ಅದು ಹೀಗೆ ಹೇಳಿಕೊಂಡಿದೆ: ‘‘ವಿದ್ಯಾರ್ಥಿನಿಯರನ್ನು ಪುರುಷ ಪೊಲೀಸ್ ಅಧಿಕಾರಿಗಳು ಹಿಡಿದೆಳೆದು ಥಳಿಸಿದ್ದಾರೆ. ಪೊಲೀಸರು ಸುಮಾರು 2 ಕಿ.ಮೀ. ತನಕ ಓಡಿಸಿಕೊಂಡು ಬಂದು ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ. ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಮೂವರು ಅಧಿಕಾರಿಗಳು ಸೇರಿದಂತೆ 36 ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿ ಅವರನ್ನು ಅಜ್ಞಾತ ಸ್ಥಳಗಳಲ್ಲಿರಿಸಲಾಗಿದೆ.’’
ಕೆಲವು ವರದಿಗಳ ಪ್ರಕಾರ ವಿದ್ಯಾರ್ಥಿಗಳು ಮಂಗಳವಾರದ ಲಾಠಿಚಾರ್ಜ್ ಹಾಗೂ 28 ವಿದ್ಯಾರ್ಥಿಗಳ ಬಂಧನ ಖಂಡಿಸಿ ನಾಲ್ಕು ದಿನಗಳ ಕಾಲ ತರಗತಿಗಳನ್ನು ಬಹಿಷ್ಕರಿಸುತ್ತಿದ್ದಾರೆ.







