ರಾಜ್ಯಮಟ್ಟದ ಅಂತರ್ ಕಾಲೇಜು ಉತ್ಸವಕ್ಕೆ ಚಾಲನೆ

ಮಂಗಳೂರು, ಮಾ. 24: ಮೂಡು ಬಿದಿರೆಯ ಮಂಗಳೂರು ಇನ್‌ಸ್ಟಿಟ್ಯೂಟ್ ಆ್ ಟೆಕ್ನಾಲಜಿ ಮತ್ತು ಇಂಜಿನಿಯರಿಂಗ್ (ಮೈಟ್) ಕಾಲೇಜು ವತಿಯಿಂದ ಎರಡು ದಿನ ಕಾಲ ನಡೆಯುವ ‘ಸೆನ್ಶಿಯಾ-2016’ ರಾಜ್ಯ ಮಟ್ಟದ ಅಂತರ್ ಕಾಲೇಜು ಸಾಂಸ್ಕೃತಿಕ, ತಾಂತ್ರಿಕ ಮತ್ತು ನಿರ್ವಹಣಾ ಉತ್ಸವಕ್ಕೆ ಇಂದು ಚಾಲನೆ ನೀಡಲಾಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತ ನಾಡಿದ ಟಾಟಾ ಕನ್ಸಲ್ಟೆನ್ಸಿ ಸರ್ವಿಸ್‌ನ ಬೆಂಗಳೂರು ಪ್ರಾದೇಶಿಕ ಮುಖ್ಯಸ್ಥ (ಎಚ್‌ಆರ್) ಬಿ.ಬಿ.ಶೆಟ್ಟಿ, ಕಂಪೆನಿಗಳ ನಿರೀಕ್ಷೆಗಳಿಗೆ ತಕ್ಕುದಾದ ರೀತಿಯಲ್ಲಿ ವಿದ್ಯಾರ್ಥಿಗಳನ್ನು ತಯಾರು ಗೊಳಿಸುವ ಕಾರ್ಯ ಶೈಕ್ಷಣಿಕ ಮಟ್ಟದಲ್ಲೇ ನಡೆದಲ್ಲಿ ಉದ್ಯೋಗ ಪಡೆಯಲು ಸಹಕಾರಿಯಾಗಲಿದೆ ಎಂದರು. ಜಾಗತಿಕ ಯುಗದಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರತಿ ಮೂರು ನಿಮಿಷಕ್ಕೊಮ್ಮೆ ಬದಲಾವಣೆಗಳು ಸಂಭವಿಸುತ್ತಿವೆ. ಸ್ಪರ್ಧಾತ್ಮಕ ಯುಗದೊಂದಿಗೆ ಹೆಜ್ಜೆ ಹಾಕಲು ವಿದ್ಯಾರ್ಥಿಗಳು ತಯಾರಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು. ರಾಜಲಕ್ಷ್ಮೀ ಶಿಕ್ಷಣ ಟ್ರಸ್ಟ್‌ನ ಅಧ್ಯಕ್ಷ ರಾಜೇಶ್ ಚೌಟ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಸಂವಹನಾ ಕೌಶಲ್ಯವನ್ನು ಮೈಗೂಡಿಸಿಕೊಳ್ಳಬೇಕು. ತಂತ್ರಜ್ಞಾನ ಯುಗ ಕ್ಷಿಪ್ರಗತಿಯಲ್ಲಿ ಸಾಗುತ್ತಿರುವ ಈ ದಿನಗಳಲ್ಲಿ ಪ್ರತಿದಿನವೂ ಸ್ಪರ್ಧೆ ಎದುರಿಸಲು ಸಜ್ಜಾಗಬೇಕು ಎಂದರು.
ಕಾಲೇಜಿನ ಸಲಹೆಗಾರ ಪ್ರೊ. ಜಿ.ಆರ್.ರೈ ಮಾತನಾಡಿದರು. ಕಾರ್ಯಕ್ರಮ ಸಂಯೋಜಕಿ ಜಯಶ್ರೀ ಉಪಸ್ಥಿತರಿದ್ದರು.
ಪ್ರಾಂಶುಪಾಲ ಡಾ. ಜಿ. ಎಲ್. ಈಶ್ವರಪ್ರಸಾದ್ ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕಿ ಡಾ. ಆಶಾ ಕ್ರಾಸ್ತಾ ವಂದಿಸಿದರು. ಅಂಜಲಿ ಮತ್ತು ತೇಜಸ್ ನಿರೂಪಿಸಿದರು.





