ಕಣ್ಣೂರು ಸ್ಫೋಟಕ್ಕೆ ಅನಧಿಕೃತ ಪಟಾಕಿ ಸಂಗ್ರಹ ಕಾರಣ : ಕೇರಳ ಪೊಲೀಸ್

ಕಣ್ಣೂರು, ಮಾರ್ಚ್.25: ಕಣ್ಣೂರಿನಲ್ಲಿ ಗುರುವಾರ ರಾತ್ರೆ ನಡೆದಿದ್ದ ಸ್ಫೋಟಕ್ಕೆ ಅನಧಿಕೃತ ಪಟಾಕಿ ಸಂಗ್ರಹದಲ್ಲಿ ಬೆಂಕಿ ಕಾಣಿಸಿಕೊಂಡಿದ್ದೆ ಕಾರಣವೆಂದು ಪೊಲೀಸ್ ಮುಖ್ಯಸ್ಥ ಹರಿಶಂಕರ್ ತಿಳಿಸಿದ್ದಾರೆ. ಘಟನಾಸ್ಥಳಕ್ಕೆ ಭೇಟಿ ನೀಡಿದ ಬಳಿಕ ಅವರು ಪತ್ರಕರ್ತರನ್ನುದ್ದೇಶಿಸಿ ಮಾತಾಡುತ್ತಿದ್ದರು. ಪಟಾಕಿಯನ್ನು ಯಾರು ಅಲ್ಲಿ ಸಂಗ್ರಹಿಸಿಟ್ಟಿದ್ದರೆಂಬ ಮಾಹಿತಿ ಲಭಿಸಿದೆಯೆಂದೂ ಅವರು ಹೇಳಿದ್ದಾರೆ. ಗುರುವಾರ ರಾತ್ರಿ 11.45ಕ್ಕೆ ಪಳ್ಳಿಕುನ್ನು ಪೊಡಿಕುಂಡು ರಾಜೇಂದ್ರ ನಗರದ ಕಾಲನಿಯ ಮನೆಯಲ್ಲಿ ಭಾರೀ ಸ್ಫೋಟ ಸಂಭವಿಸಿತ್ತು. ಅಲವಿಲ್ ಪನ್ಯನ್ ಪಾರ ಚಿಕ್ಕಾಟ್ಟುಪೀಡಿಗದ ಅನೂಪ್ ಮತ್ತು ಕುಟುಂಬ ಮೂರು ವರ್ಷಗಳಿಂದ ವಾಸಿಸುತ್ತಿದ್ದ ಮನೆ ಸ್ಫೋಟದಲ್ಲಿ ಸಂಪೂರ್ಣ ಧ್ವಂಸವಾಗಿದೆ. ಸ್ಫೋಟ ಸಂಭವಿಸುವ ವೇಳೆ ಮನೆಯೊಳಗಿದ್ದ ಅನೂಪ್‌ರ ಪುತ್ರಿ ಹಿಭಾ(13)ಳನ್ನು ಗಂಭೀರಗಾಯಗಳೊಂದಿಗೆ ಪರಿಯಾರಂ ಮೆಡಿಕಲ್ ಕಾಲೇಜಾಸ್ಪತ್ರೆಗೆ ಸೇರಿಸಲಾಗಿದೆ. ಹಿಬಾಳ ದೇಹದ ಶೇ.40ರಷ್ಟು ಭಾಗ ಸುಟ್ಟಿವೆಯೆಂದು ವರದಿಯಾಗಿದೆ. ಅನೂಪ್‌ರ ಪತ್ನಿ ರಾಹಿಲ ಮತ್ತು ಪರಿಸರದ ಇಬ್ಬರಿಗೆ ಗಾಯಗಳಾಗಿವೆ.
ಧ್ವಂಸವಾದ ಮನೆಯ ಸಮೀಪದ ಹಲವಾರು ಮನೆಗಳು ಸ್ಫೋಟದ ಪರಿಣಾಮವಾಗಿ ಭಾಗಶಃ ಹಾನಿಗೀಡಾಗಿವೆ. ಅನೂಪ್‌ರ ಮನೆಯ ಹತ್ತಿರ ನಿಲ್ಲಿಸಲಾಗಿದ್ದ ಕಾರಿನಲ್ಲಿ ಸ್ಫೋಟವಾಯಿತೇ ಎಂಬ ಸಂದೇಹವೂ ವ್ಯಕ್ತಪಡಿಸಲಾಗುತ್ತಿದೆಯೆನ್ನಲಾಗಿದೆ.
ಸ್ಫೋಟ ಸಂಭವಿಸುವ ವೇಳೆ ಮನೆಯೊಳಗೆ ಹಿಭಾ ಮಾತ್ರ ಇದ್ದಳೆಂದು ವರದಿಯಾಗಿದೆ. ಅವಳತಾಯಿ ರಾಹಿಲ ಮನೆಯ ಹೊರಗಿದ್ದರು. ಅನೂಪ್ ಮನೆಯಲ್ಲಿರಲಿಲ್ಲ. ಸ್ಫೋಟಕ್ಕೆ ಮನೆಯ ಕಲ್ಲುಗಳು ಹತ್ತು ಮೀಟರ್ ದೂರಕ್ಕೆ ಹಾರಿವೆ. ಘಟನೆಯಿಂದಾಗಿ ಪ್ರದೇಶದ ವಿದ್ಯತ್ ಸರಬರಾಜು ಸ್ಥಗಿತವಾಗಿತ್ತು ಎಂದು ವರದಿಗಳು ತಿಳಿಸಿವೆ.







