ನನ್ನ ಸಂದರ್ಶಕಿ ಮುಸ್ಲಿಂ ಅಂತ ಯಾರೂ ಹೇಳಿರಲಿಲ್ಲ
ಹೋರಾಟಗಾರ್ತಿ ಸೂಕಿಯ ಆಘಾತಕಾರಿ ಹೇಳಿಕೆ

ಲಂಡನ್, ಮಾ. 25: ಆಕೆ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆಯೇನೋ ಹೌದು. ಆದರೆ, ಸಂದರ್ಶನವೊಂದರಲ್ಲಿ ಆಕೆ ಹೇಳಿದ ಮಾತುಗಳು ಆಘಾತಕಾರಿಯಾಗಿದ್ದವು. ಹೊರ ಜಗತ್ತಿಗೆ ಕಾಣದ ಇನ್ನೊಂದು ಮುಖ ಆಕೆಯಲ್ಲಿ ಇದೆಯೇನೋ ಎಂಬ ಸಂಶಯ ಹುಟ್ಟಿಸಿವೆ.
2013ರಲ್ಲಿ ಮ್ಯಾನ್ಮಾರ್‌ನ ಪ್ರಜಾಪ್ರಭುತ್ವ ಹೋರಾಟಗಾರ್ತಿ ಆಂಗ್ ಸಾನ್ ಸೂಕಿ ಬಿಬಿಸಿ ಸುದ್ದಿ ವಾಹಿನಿಯ ‘ಬಿಬಿಸಿ ಟುಡೆ’ ಕಾರ್ಯಕ್ರಮಕ್ಕೆ ಸಂದರ್ಶನವೊಂದನ್ನು ನೀಡಿದರು. ಸಂದರ್ಶನ ಮಾಡಿದ್ದು ಮಿಶಲ್ ಹುಸೈನ್ ಎಂಬ ನಿರೂಪಕಿ. ಸಂದರ್ಶನದಲ್ಲಿ ಮಿಶಲ್ ಹುಸೈನ್ ತನ್ನ ಅತಿಥಿಯನ್ನು ಚೆನ್ನಾಗಿಯೇ ಗೋಳುಹೊಯ್ಯಿಸಿಕೊಂಡರು. ಇದರಿಂದ ಬೇಸತ್ತ ಸೂ ಕಿ, ‘‘ನನ್ನನ್ನು ಸಂದರ್ಶನ ಮಾಡುವುದು ಓರ್ವ ಮುಸ್ಲಿಂ ವ್ಯಕ್ತಿ ಎಂಬುದಾಗಿ ಯಾರೂ ನನಗೆ ಹೇಳಿಲ್ಲ’’ ಎಂದು ಹೊರಗೆ ಗೊಣಗಿದರು ಎಂದು ‘ಡೇಲಿ ಮೇಲ್’ ಹೇಳಿದೆ.
ಪೀಟರ್ ಪೋಫಮ್ ಬರೆದ ಹೊಸ ಪುಸ್ತಕ ‘ದ ಲೇಡಿ ಆ್ಯಂಡ್ ದ ಜನರಲ್ಸ್: ಆಂಗ್ ಸಾನ್ ಸೂ ಕಿ ಆ್ಯಂಡ್ ಬರ್ಮಾಸ್ ಸ್ಟ್ರಗಲ್ ಫಾರ್ ಫ್ರೀಡಂ’ ಈ ಬಗ್ಗೆ ಹೆಚ್ಚಿನ ವಿವರಣೆಯನ್ನು ನೀಡಿದೆ.
ಮ್ಯಾನ್ಮಾರ್‌ನಲ್ಲಿ ನಡೆಯುತ್ತಿರುವ ಮುಸ್ಲಿಮರ ಹತ್ಯಾಕಾಂಡ ಮತ್ತು ಇಸ್ಲಾಂ ವಿರೋಧಿ ಭಾವನೆಗಳನ್ನು ಖಂಡಿಸುತ್ತೀರಾ ಎಂಬುದಾಗಿ ಸಂದರ್ಶಕಿ ಮಿಶಲ್ ಹುಸೈನ್ ಕೇಳಿದರು. ಆದರೆ, ಹಾಗೆ ಮಾಡಲು ಸೂ ಕಿ ನಿರಾಕರಿಸಿದರು. ಬದಲಿಗೆ ಅವರು ಹೀಗೆ ಹೇಳಿದರು: ‘‘ಹಲವಾರು ಕಾರಣಗಳಿಗಾಗಿ ಭಾರೀ ಸಂಖ್ಯೆಯಲ್ಲಿ ಬೌದ್ಧರೂ ದೇಶವನ್ನು ತೊರೆದಿದ್ದಾರೆ ಎಂದು ನನಗನಿಸುತ್ತದೆ. ಇದು ಸರ್ವಾಧಿಕಾರಿ ಆಡಳಿತದಲ್ಲಿ ನಾವು ಅನುಭವಿಸುತ್ತಿರುವ ಯಾತನೆಗಳ ಫಲಿತಾಂಶವಾಗಿದೆ’’.
ಮ್ಯಾನ್ಮಾರ್‌ನಲ್ಲಿ ಮುಸ್ಲಿಮರ ಜನಸಂಖ್ಯೆ 4 ಶೇಕಡ. ಹೆಚ್ಚಾಗಿ ಹಿಂಸೆಯನ್ನು ಅನುಭವಿಸುವವರು ರೊಹಿಂಗ್ಯಾ ಮುಸ್ಲಿಮರು. ರೊಹಿಂಗ್ಯ ಮುಸ್ಲಿಮರಿಗೆ ಪೌರತ್ವವನ್ನು ನೀಡುವುದನ್ನು ನಿಲ್ಲಿಸಲಾಗಿದೆ ಹಾಗೂ ಅವರಿಗೆ ಯಾವುದೇ ರಾಜಕೀಯ ಅಧಿಕಾರವಿಲ್ಲ.
ಕಳೆದ ವರ್ಷದ ನವೆಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಸೂ ಕಿಯ ನ್ಯಾಶನಲ್ ಲೀಗ್ ಫಾರ್ ಡೆಮಾಕ್ರಸಿ (ಎನ್‌ಎಲ್‌ಡಿ) ಅಭೂತಪೂರ್ವ ಬಹುಮತದಿಂದ ಅಧಿಕಾರಕ್ಕೆ ಬಂದಿದೆ.
ಸ್ವತಃ ಸೂ ಕಿ ದೇಶದ ಅಧ್ಯಕ್ಷೆಯಾಗುವುದನ್ನು ಸಂವಿಧಾನ ನಿರ್ಬಂಧಿಸಿರುವುದರಿಂದ, ಅವರ ನಿಕಟವರ್ತಿ ಹಟಿನ್ ಕ್ಯಾವ್ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಸೂ ಕಿಯನ್ನು ವಿದೇಶಾಂಗ ಸಚಿವೆಯನ್ನಾಗಿ ನೂತನ ಅಧ್ಯಕ್ಷರು ನೇಮಿಸಿದ್ದಾರೆ.







