ಬಿಜೆಪಿಯ ನಿರ್ಮಲ್ ಸಿಂಗ್ ಜಮ್ಮು -ಕಾಶ್ಮೀರದ ಮೈತ್ರಿ ಸರಕಾರದಲ್ಲಿ ಉಪ ಮುಖ್ಯ ಮಂತ್ರಿ

ಶ್ರೀನಗರ, ಮಾ.25: ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೊಮ್ಮೆ ರಚನೆಯಾಗಲಿರುವ ಪಿಡಿಪಿ-ಬಿಜೆಪಿ ಮೈತ್ರಿ ಸರಕಾರದಲ್ಲಿ ಬಿಜೆಪಿಯ ನಿರ್ಮಲ್ ಸಿಂಗ್ ಉಪಮುಖ್ಯ ಮಂತ್ರಿಯಾಗಿ ಮುಂದುವರಿಯಲಿದ್ದಾರೆ
ಇಂದು ನಡೆದ ಬಿಜೆಪಿ ಶಾಸಕಾಂಗ ಸಭೆಯಲ್ಲಿ ಮೈತ್ರಿ ಸರಕಾರ ರಚನೆಗೆ ಪಿಡಿಪಿಗೆ ಬೆಂಬಲ ವ್ಯಕ್ತಪಡಿಸಿದ ಬಿಜೆಪಿ ಶಾಸಕಾಂಗ ಸಭೆಯು ನಿರ್ಮಲ್ ಸಿಂಗ್ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ನೇಮಕ ಮಾಡಿತು. ಅವರು ಹಿಂದೆ ದಿವಂಗತ ಮುಫ್ತಿ ಮುಹಮ್ಮದ್ ಸಯೀದ್ ಸಚಿವ ಸಂಪುಟದಲ್ಲಿ ಉಪಮುಖ್ಯ ಮಂತ್ರಿಯಾಗಿದ್ದರು. ಇದೀಗ ಅವರ ಮಗಳು ಪಿಡಿಪಿ ಅಧ್ಯಕ್ಷೆ ಮೆಹಬೂಬ ಮುಫ್ತಿ ನೇತೃತ್ವದ ಸಚಿವ ಸಂಪುಟದಲ್ಲಿ ಉಪ ಮುಖ್ಯ ಮಂತ್ರಿ ಯಾಗಲಿದ್ದಾರೆ.
ಗುರುವಾರ ಶ್ರೀನಗರದಲ್ಲಿ ನಡೆದ ಪಿಡಿಪಿ ಶಾಸಕಾಂಗ ಸಭೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಸರಕಾರ ರಚನೆಗೆ ಯಾವುದೇ ಷರತ್ತುಗಳಿಲ್ಲದೆ ತೀರ್ಮಾನ ಕೈಗೊಳ್ಳಲಾಗಿತ್ತು. ಪಿಡಿಪಿ ಅಧ್ಯಕ್ಷೆ ಮೆಹಬೂಬ ಮುಫ್ತಿ ಅವರನ್ನು ಮುಖ್ಯ ಮಂತ್ರಿ ಹುದ್ದೆಗೆ ಆಯ್ಕೆ ಮಾಡಿತ್ತು.
ಮೈತ್ರಿ ಸರಕಾರ ರಚೆನೆಯ ಬಗ್ಗೆ ಇಂದು ಸಂಜೆ ಪಿಡಿಪಿ ಮತ್ತು ಬಿಜೆಪಿ ರಾಜ್ಯಪಾಲರನ್ನು ಭೇಟಿಯಾಗುವ ನಿರೀಕ್ಷೆ ಇದೆ. ಮಾರ್ಚ್ 22ರಂದು ಮೆಹಬೂಬಾ ಮುಫ್ತಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಚರ್ಚಿಸಿದ ಬಳಿಕ ಸರಕಾರ ರಚನೆಗೆ ಒಪ್ಪಿಕೊಂಡಿದ್ದರು.ಜಮ್ಮು -ಕಾಶ್ಮೀರದಲ್ಲಿ ಜನವರಿ 7ರಂದು ಮುಖ್ಯ ಮಂತ್ರಿ ಮುಫ್ತಿ ಮುಹಮ್ಮದ್ ಸಯೀದ್ ನಿಧನರಾದ ಬಳಿಕ ರಾಜಕೀಯ ಬಿಕ್ಕಟ್ಟು ಕಾಣಿಸಿಕೊಂಡು ಇದೀಗ ರಾಜ್ಯಪಾಲರ ಆಡಳಿತ ಜಾರಿಯಲ್ಲಿದೆ.





