ಮಂಗಳೂರು : ಪಿಲಿಕುಳದಲ್ಲಿ 20 ಕೋಟಿ ರೂ. ವೆಚ್ಚದಲ್ಲಿ ‘ಅಕ್ವೇರಿಯಂ’: ಸಚಿವ ಅಭಯ
‘ರಾಷ್ಟ್ರೀಯ ಕ್ರಾಫ್ಟ್ ಬಜಾರ್’ಗೆ ಚಾಲನೆ

ಮಂಗಳೂರು, ಮಾ.25: ಸಮುದ್ರದಲ್ಲಿ ಅಳಿವಿನಂಚಿನಲ್ಲಿರುವ ಮೀನುಗಳ ತಳಿಗಳ ಸಂರಕ್ಷಣೆ ಹಾಗೂ ಸಂಶೋಧನೆಗಾಗಿ ಪಿಲಿಕುಳದಲ್ಲಿ 20 ಕೋಟಿ ರೂ. ವೆಚ್ಚದಲ್ಲಿ ‘ಫಿಶ್ ಅಕ್ವೇರಿಯಂ’ ಸ್ಥಾಪಿಸಲಾಗುವುದು ಎಂದು ರಾಜ್ಯದ ಕ್ರೀಡೆ ಮತ್ತು ಯುವಜನ ಸಬಲೀಕರಣ ಸಚಿವ ಅಭಯಚಂದ್ರ ಜೈನ್ ತಿಳಿಸಿದ್ದಾರೆ.
ಪಿಲಿಕುಳದ ಡಾ. ಶಿವರಾಮ ಕಾರಂತ ನಿಸರ್ಗಧಾಮದ ಅರ್ಬನ್ ಹಾತ್‌ನ ಅಧಿಕೃತ ಉದ್ಘಾಟನೆ ಹಾಗೂ ಇಂದಿನಿಂದ ಎಪ್ರಿಲ್ 3ರವರೆಗೆ ನಡೆಯಲಿರುವ ರಾಷ್ಟ್ರೀಯ ಕ್ರಾಫ್ಟ್ ಬಜಾರನ್ನು ಉದ್ಘಾಟಿಸಿ ಅವರು ಮಾತನಾಡಿದರು.
200ಕ್ಕೂ ಅಧಿಕ ಮೀನಿನ ತಳಿಗಳನ್ನು ಯುವ ಜನತೆಗೆ ಪ್ರದರ್ಶನ ಕೇಂದ್ರವಾಗಲಿರುವ ಫಿಶ್ ಅಕ್ವೇರಿಯಂಗಾಗಿ ರಾಜ್ಯ ಬಜೆಟ್‌ನಲ್ಲಿ 15 ಕೋಟಿ ರೂ.ಗಳನ್ನು ಮೀನುಗಾರಿಕಾ ಇಲಾಖೆಯಿಂದ ಕಾದಿರಿಸಲಾಗಿದೆ. ಈ ಮೂಲಕ ಈಗಾಗಲೇ ಜಿಲ್ಲೆಗೆ ಅತೀ ದೊಡ್ಡ ಸಂಪತ್ತಾಗಿ ಗುರುತಿಸಿಕೊಂಡಿರುವ ಪಿಲಿಕುಳ ನಿಸರ್ಗಧಾಮವನ್ನು ಪ್ರವಾಸಿಗರ ಆಕರ್ಷಣೀಯ ಕೇಂದ್ರವನ್ನಾಗಿಸಲು ಇನ್ನಷ್ಟು ಮುತುವರ್ಜಿ ವಹಿಸಬೇಕಾದ ಅಗತ್ಯವಿದೆ ಎಂದರು.
ಪಿಲಿಕುಳ ಕರಕುಶಲ ಗ್ರಾಮದಲ್ಲಿ ಈಗಾಗಲೇ ಕೃಷಿ ಬದುಕಿಗೆ ಪೂರಕವಾದ ವಸ್ತುಗಳು ತಯಾರಾಗುತ್ತಿದ್ದು, ಅದನ್ನು ಯುವಜನತೆಗೆ ತಲುಪಿಸುವ ನಿಟ್ಟಿನಲ್ಲಿ ಜನಾಕರ್ಷಣೆಯ ಕೇಂದ್ರವಾಗಿಸಲು ಪ್ರಯತ್ನ ನಡೆಯಬೇಕು. ಕರಕುಶಲ ಕರ್ಮಿಗಳಿಂದ ತಯಾರಾಗುವ ನಾನಾ ರೀತಿಯ ಬುಟ್ಟಿ, ಮಣ್ಣಿನ ವಸ್ತುಗಳಿಗೆ ಹೆಚ್ಚಿನ ಬೇಡಿಕೆ ಹಾಗೂ ಮಾರುಕಟ್ಟೆ ದೊರೆತು ಅವರ ಸ್ವಾಭಿಮಾನದ ಬದುಕಿಗೆ ಪೂರಕವಾಗುವ ನಿಟ್ಟಿನಲ್ಲಿ ಸರಕಾರ ಒತ್ತು ನೀಡುತ್ತಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಜಾನಪದ ವಿಶ್ವವಿದ್ಯಾನಿಲಯದ ಕುಲಪತಿ ಡಾ. ಚಿನ್ನಪ್ಪ ಗೌಡರನ್ನು ಸನ್ಮಾನಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಮಾತನಾಡಿ, ಪಿಲಿಕುಳದಲ್ಲಿ ಕರಕುಶಲ ಕರ್ಮಿಗಳು ತಯಾರಿಸಿದ ವಸ್ತುಗಳಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರದ ಜವಳಿ ಇಲಾಖೆಯ 210 ಲಕ್ಷ ರೂ. ಹಾಗೂ ರಾಜ್ಯ ಸರಕಾರದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ವತಿಯಿಂದ 90 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಅರ್ಬನ್ ಹಾತ್ ಸಂಕೀರ್ಣ ನಿರ್ಮಾಣವಾಗಿ ಹಲವಾರು ರೀತಿಯಲ್ಲಿ ಬಳಕೆಯಾಗಿ ಇದೀಗ ಅಧಿಕೃತವಾಗಿ ಉದ್ಘಾಟನೆಗೊಂಡಿದೆ. ಈ ಮೂಲಕ ಸಂಸ್ಕೃತಿಯ ರಕ್ಷಣೆಯ ಕೇವಲ ಬಾಯಿ ಮಾತು ಆಗದೆ, ನಾವು ನಮ್ಮ ಸಂಸ್ಕೃತಿ, ಸಂಪ್ರದಾಯದ ರೀತಿಯಲ್ಲಿ ತಯಾರಾದ ವಸ್ತುಗಳನ್ನು ಖರೀದಿಸಲು ಆಸಕ್ತಿ ತೋರುವ ಮೂಲಕ ಕರಕುಶಲ ಕರ್ಮಿಗಳಿಗೆ ಉತ್ತೇಜನ ನೀಡುವ ಕೆಲಸವಾಗಬೇಕು ಎಂದರು.
ಪಿಲಿಕುಳದಲ್ಲಿ ತಿಂಗಳಿಗೊಂದರಂತೆ ಕಾರ್ಯಕ್ರಮ ಮುಂದುವರಿಯಲಿದ್ದು, ಮುಂದಿನ ತಿಂಗಳು ಬಿಸು ಪರ್ಬವನ್ನು ಆಚರಿಸಲಾಗುವುದು. ಅದರಂಗವಾಗಿ ಎ. 13ರಂದು ಅಂಚೆ ಇಲಾಖೆಯ ಸಹಯೋಗದಲ್ಲಿ ‘ಪೋಸ್ಟೇಜ್ ಕವರ್’ ಬಿಡುಗಡೆಗೊಳಿಸಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.
ಪಿಲಿಕುಳ ನಿಸರ್ಗಧಾಮದ ಕಾರ್ಯನಿರ್ವಾಹಕ ನಿರ್ದೇಶಕ ಪ್ರಭಾಕರ ಶರ್ಮಾ ಸ್ವಾಗತಿಸಿದರು.
ಭಾರತ ಸರಕಾರದ ಕೈಮಗ್ಗ ಇಲಾಖೆಯ ಹಿರಿಯ ಅಧಿಕಾರಿ ಶ್ರೀನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ, ಮಧ್ಯವರ್ತಿಗಳಿಲ್ಲದೆ ಕರಕುಶಲ ಕರ್ಮಿಗಳು ತಯಾರಿಸಿದ ವಸ್ತುಗಳನ್ನು ನೇರವಾಗಿ ಗ್ರಾಹಕರಿಗೆ ತಲುಪಿಸುವ ಉದ್ದೇಶದಿಂದ ಅರ್ಬನ್ ಹಾತ್ ರಚನೆಯಾಗಿದ್ದು, ವರ್ಷಪೂರ್ತಿ ಕಾರ್ಯಕ್ರಮವನ್ನು ನಡೆಸುವ ಅಗತ್ಯವಿದೆ ಎಂದು ಅವರು ಹೇಳಿದರು.
ವೇದಿಕೆಯಲ್ಲಿ ಶಾಸಕ ಬಿ.ಎ. ಮೊಯ್ದೀನ್ ಬಾವಾ, ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಗ್ರಾ.ಪಂ. ಸದಸ್ಯೆ ಕವಿತಾ ದಿನೇಶ್, ಜಿ.ಪಂ. ಸಿಇಒ ಶ್ರೀವಿದ್ಯಾ, ಮೂಡಾ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ತಾ.ಪಂ.ಸದಸ್ಯ ಸಿದ್ದೀಕ್, ಮನಪಾ ಆಯುಕ್ತ ಡಾ.ಎಚ್.ಎನ್. ಗೋಪಾಲಕೃಷ್ಣ, ಜಂಟಿ ಆಯುಕ್ತ ಗೋಕುಲ್‌ದಾಸ್ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.







