ಮೂಡುಬಿದಿರೆ : ಸಾಂಘಿಕ ಕಾರ್ಯಕ್ಕೆ ಯಶಸ್ಸು ಖಚಿತ : ರಾಮಕೃಷ್ಣ ಶಿರೂರು

ಮೂಡುಬಿದಿರೆ: ಶಿಕ್ಷಕ ವೃತ್ತಿ ಸಮಾಜದಲ್ಲಿ ಶ್ರೇಷ್ಠವಾದ ವೃತ್ತಿಯಾಗಿದೆ. ಶಿಕ್ಷಕನಾದವನು ಜ್ಞಾನದ ಬೆಳಕನ್ನು ವಿದ್ಯಾರ್ಥಿಗಳಿಗೆ ನೀಡುವುದರ ಮೂಲಕ ಜಗತ್ತಿಗೆ ಹೊಸ ಬೆಳಕನ್ನು ನೀಡುತ್ತಿದ್ದಾನೆ. ಆದರೆ ನಿಸ್ವಾರ್ಥ ಮನೋಭಾವನೆಯಿಂದ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿರುವ ರಾಜ್ಯದ ಪ್ರೌಢಶಾಲಾ ಸಹಶಿಕ್ಷಕರು ಹತ್ತು ಹಲವು ಸಮಸ್ಯೆಗಳನ್ನು ಅನುಭವಿಸುತ್ತಾ ಬಂದಿದ್ದಾರೆ. ವೇತನ ತಾರತಮ್ಯ, 400/- ರೂಪಾಯಿ ವಿಶೇಷ ಭತ್ತೆ, 1994 ರ ಸ್ಟೆಪ್-ಅಪ್ ಸಮಸ್ಯೆ, ದೋಷಪೂರಿತ ವರ್ಗಾವಣಾ ನಿಯಮ ಸಮಸ್ಯೆ, ಆರೋಗ್ಯ ಸಂಜೀವಿನಿ, ಹೊಸ ಪಿಂಚಣಿ ವ್ಯವಸ್ಥೆಯ ಸಮಸ್ಯೆ ಮುಂತಾದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಎಲ್ಲಾ ಸಮಸ್ಯೆಗಳ ವಿರುದ್ಧ ಶಿಕ್ಷಕರು ಸಂಘಟಿತರಾಗಿ ಹೋರಾಟ ನಡೆಸಿದರೆ ಯಶಸ್ಸು ಖಚಿತ ಎಂದು ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ರಾಮಕೃಷ್ಣ ಶಿರೂರು ಹೇಳಿದರು.
ಅವರು ಮೂಡುಬಿದಿರೆಯಲ್ಲಿ ನಡೆದ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ತಾಲೂಕು ಘಟಕದ ಮಹಾಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘ 30 ವರ್ಷಗಳ ಹಿಂದೆ ಸ್ಥಾಪಿತವಾದ ಒಂದು ರಾಜ್ಯ ಮಟ್ಟದ ಶಿಕ್ಷಕ ಸಂಘಟನೆ ಆಗಿದೆ. ಈ ವರ್ಷ ನಮ್ಮ ಸಂಘಕ್ಕೆ ಸರಕಾರದ ಮಾನ್ಯತೆ ಲಭಿಸಿರುವುದು ಹೆಮ್ಮೆಯ ವಿಚಾರವಾಗಿದೆ ಎಂದು ಅವರು ಮೂಡುಬಿದಿರೆಯ ಸಹಶಿಕ್ಷಕ ಬಂಧುಗಳೊಡನೆ ತಮ್ಮ ಅನುಭವವನ್ನು ಹಂಚಿಕೊಂಡರು. ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿರುವ ತಾಲೂಕು ಅಧ್ಯಕ್ಷ ವಸಂತ ಕಲ್ಲಮುಂಡ್ಕೂರು ಅವರು ಶೈಕ್ಷಣಿಕ ಚಿಂತನೆಯ ಜೊತೆಯಲ್ಲಿ ಶಿಕ್ಷಕರ ಸಮಸ್ಯೆಗಳ ನಿವಾರಣೆಗಾಗಿ ಸಂಘಟಿತರಾಗಿ ಹೋರಾಡೋಣ ಎಂದರು.
ತಾಲೂಕು ಉಪಾಧ್ಯಕ್ಷ ದೇವದಾಸ ಕಿಣಿ, ಶಕುಂತಳಾ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕರುಣಾಕರ ಅವರು ಸಮಯೋಚಿತವಾಗಿ ಮಾತನಾಡಿದರು. ಮುಂದಿನ ವರ್ಷದ ಚಟುವಟಿಕೆಗಳ ಕಾರ್ಯ ಯೋಜನೆಗಳ ಬಗ್ಗೆ ಚರ್ಚಿಸಲಾಯಿತು. ಕಾರ್ಯದರ್ಶಿ ಮಹಾದೇವ ಅವರು ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಕೋಶಾಧಿಕಾರಿ ಬಾಲಕೃಷ್ಣ ರೆಖ್ಯ ವಾರ್ಷಿಕ ಲೆಕ್ಕ ಪತ್ರ ಮಂಡಿಸಿದರು. ಸಂಘಟನಾ ಕಾರ್ಯದರ್ಶಿ ಬಸವರಾಜ ನಾಶಿ ಧನ್ಯವಾದ ಸಲ್ಲಿಸಿದರು.







