ಪ್ರಧಾನಿ ಮೋದಿ ಮುಂಬೈ ಭೇಟಿಗೆ ಖರ್ಚಾಗಿದ್ದು ಎಷ್ಟು ಕೋಟಿ ಗೊತ್ತೇ ?

ಮುಂಬೈ : ಅಕ್ಟೋಬರ್ 2015ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಒಂದು ದಿನದ ಮುಂಬೈ ಭೇಟಿಗಾಗಿ ಮುಂಬೈ ಮೆಟ್ರೋಪಾಲಿಟನ್ ರೀಜನ್ ಡೆವಲೆಪ್ಮೆಂಟ್ ಅಥಾರಿಟಿ (ಎಂಎಂಆರ್‌ಡಿಎ) ರೂ 3.37ಕೋಟಿ ವೆಚ್ಚ ಮಾಡಿದೆಯೆಂದು ಮಾಹಿತಿ ಹಕ್ಕು ಕಾಯಿದೆಯ ಮುಖಾಂತರ ತಿಳಿದು ಬಂದಿದೆ. ಮೋದಿ ಕಳೆದ ಅಕ್ಟೋಬರ್ 11ರಂದು ಮೆಟ್ರೋ1 ಹಾಗೂ ಮೆಟ್ರೋ 7 ಯೋಜನೆಗಳಿಗೆ ಹಾಗೂ ಇಂದು ಇಲ್ಲಿನ ಬಾಬಾಸಾಹೇಬ್ ಅಂಬೇಡ್ಕರ್ ಸ್ಮಾರಕಕ್ಕೆ ಭೂಮಿಪೂಜೆ ನೆರವೇರಿಸಲು ಆಗಮಿಸಿದ್ದರು.
ಎಂಎಂಆರ್‌ಡಿಎಮೇಲೆ ತಿಳಿಸಿದ ಮೊತ್ತವನ್ನು ಪ್ರಚಾರ, ಮಾಹಿತಿ ಪುಸ್ತಿಕೆ ಹಾಗೂ ಪೆಂಡಾಲುಗಳಿಗಾಗಿ ವಿನಿಯೋಗಿಸಿತ್ತು, ಎಂದು ಮಾಹಿತಿ ಪಡೆದಿರುವ ಆರ್‌ಟಿಐ ಕಾರ್ಯಕರ್ತ ಅನಿಲ್ ಗಲ್ಗಲಿ ತಿಳಿಸಿದ್ದಾರೆ. ‘‘ಸುಮಾರು ರೂ 93.35 ಲಕ್ಷದಷ್ಟು ಹಣ ಜಲನಿರೋಧಕ ಟೆಂಟುಗಳನ್ನು ನಿರ್ಮಿಸಲು ವ್ಯಯಿಸಲಾಗಿದ್ದರೆ, ವಿದ್ಯುತ್ ಸಾಮಗ್ರಿಗಳು ಹಾಗೂ ನೇರ ಪ್ರಸಾರಕ್ಕಾಗಿ ರೂ. 71.67 ಲಕ್ಷ ವೆಚ್ಚ ಮಾಡಲಾಗಿತ್ತು. ಆರ್‌ಟಿಐ ವಿವರಗಳ ಪ್ರಕಾರ ಪ್ರತಿಕೆಗಳಲ್ಲಿ ಜಾಹೀರಾತು ಪ್ರಕಟಿಸಲು ರೂ 20.85ಲಕ್ಷ ವೆಚ್ಚ ಮಾಡಲಾಗಿತ್ತು, ಎಂದುಅನಿಲ್ ಹೇಳಿದ್ದಾರೆ.
‘‘ರಾಜ್ಯದ ಆರ್ಥಿಕತೆ ನಷ್ಟದಲ್ಲಿರುವ ಸಮಯದಲ್ಲಿ ಕೆಲವೇ ಕೆಲವು ನಿಮಿಷಗಳ ಕಾಲ ನಡೆದ ಈ ಸಮಾರಂಭಕ್ಕೆ ಇಷ್ಟು ಖರ್ಚು ಮಾಡುವ ಬದಲು ಆ ಮೊತ್ತವನ್ನು ಬೇರೆ ಉತ್ತಮ ಕಾರ್ಯಗಳಿಗೆ ಉಪಯೋಗಿಸಬಹುದಾಗಿತ್ತು,’’ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.





