ಕೊಣಾಜೆ : ಜಾತೀಯತೆಯಪ್ರಜ್ಞೆ ಮನಸ್ಸಿಂದ ತೊಲಗಬೇಕು: ಕಾಜಲ್

ನಿತ್ಯೋತ್ಸವ ಕಾರ್ಯಕ್ರಮದಲ್ಲಿ ಹರಿಶ್ಚಂದ್ರ ಕಾವ್ಯದ ಪ್ರಸ್ತುತತೆ ಎಂಬ ವಿಷಯದ ಕುರಿತ ವಿಚಾರಸಂಕಿರಣದಲ್ಲಿ ಕಾಜಲ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೊಣಾಜೆ: ಜಾತೀಯತೆ ಎಂಬುದು ಬಾಹ್ಯ ಸಂಗತಿಯಲ್ಲ. ಅದು ಭಾರತೀಯ ಮನಸಿನ ಆಳದಲ್ಲಿ ಬೇರು ಬಿಟ್ಟಿದೆ. ಅದನ್ನು ಕಿತ್ತೊಗೆಯುವ ಕಾರ್ಯ ಆಗಬೇಕಿದೆ. ಪಂಪ, ವಚನಕಾರರು, ರಾಘವಾಂಕ, ಕುಮಾರವ್ಯಾಸ, ಕನಕದಾಸರಂತಹ ಕನ್ನಡದ ಕವಿಗಳು ಕುಲದ ನೆಲೆಯನ್ನು ಪ್ರಶ್ನಿಸಿದ್ದಲ್ಲದೇ ಅದರ ಕುರಿತ ಮನೋಭಾವ ಬದಲಾಗಬೇಕಾದ ಅಗತ್ಯವನ್ನು ಸಾರಿದ್ದಾರೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘದ ಸಾಂಸ್ಕೃತಿಕ ಕಾರ್ಯದರ್ಶಿ ಕಾಜಲ್ ಹೇಳಿದರು.
ಅವರು ಮಂಗಳೂರು ವಿಶ್ವವಿದ್ಯಾನಿಲಯದ ಎಸ್ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ವತಿಯಿಂದ ಆಯೋಜಿಸಿದ್ದ ನಿತ್ಯೋತ್ಸವ ಕಾರ್ಯಕ್ರಮದಲ್ಲಿ ಹರಿಶ್ಚಂದ್ರ ಕಾವ್ಯದ ಪ್ರಸ್ತುತತೆ ಎಂಬ ವಿಷಯದ ಕುರಿತ ವಿಚಾರಸಂಕಿರಣದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿಚಾರ ಸಂಕಿರಣದಲ್ಲಿ ಹರಿಶ್ಚಂದ್ರ ಕಾವ್ಯದಲ್ಲಿ ವರ್ಗಸಂಘರ್ಷ ಎಂಬ ವಿಷಯದಲ್ಲಿ ಕನ್ನಡ ಪ್ರಥಮ ಎಂ.ಎ ವಿದ್ಯಾರ್ಥಿ ಜನಾರ್ದನ ನಾವಡ ಹಾಗೂ ಹರಿಶ್ಚಂದ್ರ ಕಾವ್ಯದಲ್ಲಿ ಮೌಲ್ಯ ಪ್ರತಿಪಾದನೆ ಎಂಬ ವಿಷಯದ ಕುರಿತು ವಿದ್ಯಾರ್ಥಿನಿ ಸಾಯಿಸುಮ ಪ್ರಬಂಧ ಮಂಡಿಸಿದರು.
ಬಳಿಕ ನಡೆದ ಸಂವಾದದಲ್ಲಿ ಡಾ. ರಾಜಶ್ರೀ, ಚಂದ್ರಶೇಖರ್, ನಮಿರಾಜ್, ವಿನೋದ್ ರಾಜ್, ಮುಸ್ತಾಫಾ, ವಿಕ್ರಂ ಮೊದಲಾದವರು ಭಾಗವಹಿಸಿದರು. ನಿತ್ಯೋತ್ಸವದ ಸಂಚಾಲಕ ಡಾ. ಧನಂಜಯ ಕುಂಬ್ಳೆ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಶ್ರುತಿ ಸ್ವಾಗತಿಸಿದರು. ಶ್ಯಾಮ್ ಪ್ರಸಾದ್ ವಂದಿಸಿದರು. ಭುವನೇಶ್ವರಿ ಕಾರ್ಯಕ್ರಮ ನಿರೂಪಿಸಿದರು.





