ಮಂಗಳೂರು: ಮಾ. 26, ಯುವಜನತೆ ಮತ್ತು ಪ್ರಜಾತಂತ್ರಕ್ಕಾಗಿ ಅಂಬೇಡ್ಕರ್ ಅಭಿಯಾನ ಸಮಾರೋಪ
ಮಂಗಳೂರು, ಮಾ. 25: ದೇಶವು ಸಂವಿಧಾನಶಿಲ್ಪಿ ಡಾ. ಬಿ. ಆರ್.ಅಂಬೇಡ್ಕರ್‌ರವರ 125ನೇ ಹುಟ್ಟು ವರ್ಷವನ್ನು ಆಚರಿಸುತ್ತಿದ್ದು, ಸಂವಿಧಾನದಲ್ಲಿ ಘೋಷಿತವಾಗಿರುವ ಸ್ವಾತಂತ್ರ್ಯ - ಸಮಾನತೆ - ಭ್ರಾತೃತ್ವಗಳು ಈ ನೆಲದಲ್ಲಿ ಬೇರುಬಿಡಲು ಆ ಮಹಾನ್ ದಾರ್ಶನಿಕನ ಚಿಂತನೆಗಳನ್ನು ವಿದ್ಯಾರ್ಥಿ - ಯುವಜನತೆ ಗಂಭೀರವಾಗಿ ಅಭ್ಯಸಿಸುವಂತಾಗಬೇಕೆಂಬ ನೆಲೆೆಯಲ್ಲಿ ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆಯ, ಸಾಮಾಜಿಕ ಒಳಗೊಳ್ಳುವಿಕೆ ಮತ್ತು ಪ್ರತ್ಯೇಕತೆ ನೀತಿ ಅಧ್ಯಯನ ಸಂಸ್ಥೆಯಾದ ಅಂಬೇಡ್ಕರ್ ಅಧ್ಯಯನ ಕೇಂದ್ರ ರಾಜ್ಯದಾದ್ಯಂತ ಯುವಜನತೆ ಮತ್ತು ಪ್ರಜಾತಂತ್ರಕ್ಕಾಗಿ ಅಂಬೇಡ್ಕರ್ ಅಭಿಯಾನವನ್ನು ನಡೆಸಿದೆ. ಈ ಅಭಿಯಾನದ ಭಾಗವಾಗಿ ದ. ಕ. ಜಿಲ್ಲೆಯಾದ್ಯಂತ ನಡೆದ ಸರಣಿ ಕಾರ್ಯಕ್ರಮಗಳ ಸಮಾರೋಪ ಸಮಾರಂಭವು ನಾಳೆ ನಗರದಲ್ಲಿ ನಡೆಯಲಿದೆ. ಅಭಿಯಾನದ ಭಾಗವಾಗಿ ಬೆಳಿಗ್ಗೆ ಗಂ. 10ಕ್ಕೆ ವೆಲೆನ್ಸಿಯಾದಲ್ಲಿರುವ ರೋಶನಿ ನಿಲಯದಲ್ಲಿ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಪ್ರಬಂಧ ಮತ್ತು ಭಾಷಣ ಸ್ಪರ್ಧೆ ಏರ್ಪಡಿಸಲಾಗಿದ್ದು, ಮಧ್ಯಾಹ್ನ ಗಂ. 2ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಮಂಗಳೂರು ವಿವಿಯ ಎನ್‌ಎಸ್‌ಎಸ್ ಸಂಯೋಜಕಿ ಪ್ರೊ. ನೀತಾ ರೈ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಬಳ್ಳಾರಿಯ ಸಮಾಜ ಅಧ್ಯಯನ ಕೇಂದ್ರದ ಫೀರ್ ಬಾಷಾ ಸಮಾರೋಪ ಭಾಷಣ ಮಾಡಲಿದ್ದಾರೆ. ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಡಾ. ಜಿ. ಸಂತೋಷ್ ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಅಭಿಯಾನದ ಸಂಪನ್ಮೂಲ ವ್ಯಕ್ತಿಗಳಾದ ಡಾ. ವಾಸುದೇವ ಬೆಳ್ಳೆ, ಡಾ. ಆಶಾಲತಾ ಪಿ. ಹಾಗೂ ಸಂಯೋಜಕ ಮಂದೀಪ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





