ಉಪ್ಪಿನಂಗಡಿ: ಬಸ್ಸು ಡಿಕ್ಕಿ, ಬೈಕ್ ಸವಾರ ಗಂಭೀರ ಗಾಯ

ಉಪ್ಪಿನಂಗಡಿ: ಕೆಎಸ್ಸಾರ್ಟಿಸಿ ಬಸ್ಸೊಂದು ಡಿಕ್ಕಿ ಹೊಡೆದು ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಉಪ್ಪಿನಂಗಡಿಯ ಬೈಪಾಸ್ ರಸ್ತೆಯಲ್ಲಿ ಶುಕ್ರವಾರ ಸಂಜೆ ನಡೆದಿದೆ.
ಮೂಲತಃ ತಮಿಳುನಾಡು ಮೂಲದ ತಂಗದೊರೆ (45) ಗಾಯಗೊಂಡ ವ್ಯಕ್ತಿ. ಇವರು ಕಳೆದ ನಾಲ್ಕು ವರ್ಷದಿಂದ ಆಲಂಕಾರಿನ ಖಾಸಗಿ ರಬ್ಬರ್ ತೋಟವೊಂದರಲ್ಲಿ ರಬ್ಬರ್ ಟ್ಯಾಪಿಂಗ್ ಕೆಲಸ ನಡೆಸುತ್ತಿದ್ದು, ಆಲಂಕಾರಿನಲ್ಲೇ ವಾಸ್ತವ್ಯವಿದ್ದರು. ಶುಕ್ರವಾರ ಉಪ್ಪಿನಂಗಡಿ ಬಂದಿದ್ದ ಇವರು ಆಲಂಕಾರಿಗೆ ತೆರಳುವ ಸಂದರ್ಭ ಇಲ್ಲಿನ ಬೈಪಾಸ್ ರಸ್ತೆಯ ಸಿಟಿಲ್ಯಾಂಡ್ ಹೊಟೇಲ್ ಬಳಿ ರಸ್ತೆಯ ಇನ್ನೊಂದು ಬದಿಯಲ್ಲಿರುವ ಪೆಟ್ರೋಲ್ ಪಂಪ್‌ಗೆ ತೆರಳಲು ಬೈಕ್ ತಿರುಗಿಸಿದ ಸಂದರ್ಭ ಕಡಬದಿಂದ ಉಪ್ಪಿನಂಗಡಿಗೆ ಬರುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಇವರ ಬೈಕ್‌ಗೆ ಡಿಕ್ಕಿ ಹೊಡೆಯಿತು. ಘಟನೆಯಿಂದ ರಸ್ತೆಗೆಸೆಯಲ್ಪಟ್ಟ ತಂಗದೊರೆ ಅವರ ತಲೆ ಹಾಗೂ ಕೈಕಾಲಿಗೆ ಗಂಭೀರ ಗಾಯವಾಗಿದೆ. ತಕ್ಷಣವೇ ಅವರನ್ನು 108 ಆರೋಗ್ಯ ಕವಚದಲ್ಲಿ ಪುತ್ತೂರು ಆಸ್ಪತ್ರೆಗೆ ಸಾಗಿಸಲಾಗಿದೆ. ಪುತ್ತೂರು ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಘಟನೆಯ ಸಂದರ್ಭ ಬೈಕ್ ಸವಾರ ಹೆಲ್ಮೆಟ್ ಧರಿಸಿದ್ದರೂ, ಅಪಘಾತದ ರಭಸಕ್ಕೆ ಇವರ ತಲೆಯಿಂದ ಹೆಲ್ಮೆಟ್ ಹಾರಿ ಹೋಗಿ ಸುಮಾರು 50 ಮೀಟರ್ ದೂರದಲ್ಲಿ ಬಿದ್ದಿದೆ.





