ಡೊನಾಲ್ಡ್, ನೀವೊಬ್ಬ ಅಸಹ್ಯ ಹೇಡಿ: ಟೆಡ್ ಕ್ರೂಝ್
ರಿಪಬ್ಲಿಕನ್ ಅಭ್ಯರ್ಥಿಗಳ ನಡುವೆ ಪರಸ್ಪರರ ‘ಹೆಂಡತಿಯರ ನಿಂದನೆ’ ಸಮರ!

ವಾಶಿಂಗ್ಟನ್, ಮಾ. 25: ಮುಂಬರುವ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಲು ಪೈಪೋಟಿ ನಡೆಸುತ್ತಿರುವ ಡೊನಾಲ್ಡ್ ಟ್ರಂಪ್ ಮತ್ತು ಟೆಡ್ ಕ್ರೂಝ್ ತಮ್ಮ ವೈರತ್ವವನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ. ಈ ಬಾರಿ ಅವರು ಪರಸ್ಪರರ ಹೆಂಡತಿಯರನ್ನು ಮುಂದಿಟ್ಟುಕೊಂಡು ಒಬ್ಬರನ್ನೊಬ್ಬರು ಹಣಿಯಲು ಯತ್ನಿಸುತ್ತಿದ್ದಾರೆ. ಇದಕ್ಕಾಗಿ ಅವರು ಸಾಮಾಜಿಕ ಮಾಧ್ಯಮ ತಾಣಗಳನ್ನು ಬಳಸಿಕೊಂಡಿದ್ದಾರೆ.
ಕಳೆದ ಮಂಗಳವಾರ ಆ್ಯರಿರೆನ ಮತ್ತು ಉಟಾಹ್ ರಾಜ್ಯಗಳಲ್ಲಿ ಪ್ರೈಮರಿ ಚುನಾವಣೆಗಳು ನಡೆಯುವ ಮುನ್ನ ಟ್ರಂಪ್ ವಿರೋಧಿ ಗುಂಪು ‘ಮೇಕ್ ಅಮೆರಿಕ ಆಸಮ್’ ಜಾಹೀರಾತೊಂದನ್ನು ನೀಡಿತ್ತು. ಜಾಹೀರಾತಿನಲ್ಲಿ ಟ್ರಂಪ್‌ರ ಪತ್ನಿ, ಮಾಜಿ ರೂಪದರ್ಶಿ ಮೆಲಾನಿಯಾರ ನಗ್ನ ಚಿತ್ರವನ್ನು ಬಳಸಿಕೊಂಡಿತ್ತು. ಪಕ್ಕದಲ್ಲೇ ಈ ರೀತಿಯ ಬರಹವಿತ್ತು: ‘‘ಇವರು ಮೆಲಾನಿಯಾ ಟ್ರಂಪ್. ನಿಮ್ಮ ಮುಂದಿನ ಪ್ರಥಮ ಮಹಿಳೆ’’. ಇನ್ನೊಂದು ಸಾಲಿನಲ್ಲಿ ಹೀಗೆ ಬರೆಯಲಾಗಿತ್ತು: ‘‘ಅಥವಾ ಮಂಗಳವಾರ ನೀವು ಟೆಡ್ ಕ್ರೂಝ್‌ರನ್ನು ಬೆಂಬಲಿಸಬಹುದು’’.
45 ವರ್ಷದ ಮೆಲಾನಿಯಾ ಟ್ರಂಪ್ ಸ್ಲೊವೇನಿಯನ್ ಅಮೆರಿಕನ್ ಮಾಜಿ ರೂಪದರ್ಶಿ. ಜಾಹೀರಾತಿನಲ್ಲಿ ಹಾಕಿದ ಆಕೆಯ ನಗ್ನ ಚಿತ್ರ 2000ದಲ್ಲಿ ಆಕೆ ಪತ್ರಿಕೆಯೊಂದಕ್ಕೆ ನೀಡಿದ ಪೋಸ್ ಆಗಿತ್ತು. ಆಗ ಟ್ರಂಪ್ ಮತ್ತು ಮೆಲಾನಿಯಾ ಮದುವೆ ಆಗಿರಲಿಲ್ಲ.
ಈ ಚಿತ್ರವನ್ನು ನೋಡಿ ಕೆರಳಿದ ಟ್ರಂಪ್, ನಿಮ್ಮ ಹೆಂಡತಿಯ ರಹಸ್ಯವನ್ನೂ ಬಯಲಿಗೆಳೆಯುತ್ತೇನೆ ಎಂಬುದಾಗಿ ಟೆಡ್ ಕ್ರೂಝ್‌ಗೆ ಬೆದರಿಕೆ ಹಾಕಿದ್ದರು.
ಅದಕ್ಕೆ ಪ್ರತಿಕ್ರಿಯಿಸಿದ ಕ್ರೂಝ್, ‘‘ನಿಮ್ಮ ಹೆಂಡತಿಯ ಚಿತ್ರವನ್ನು ನಾವು ಹಾಕಿದ್ದಲ್ಲ. ಡೊನಾಲ್ಡ್, ನೀವು ನನ್ನ ಹೆಂಡತಿ ಹೈಡಿ ಕ್ರೂಝ್ ಮೇಲೆ ದಾಳಿ ನಡೆಸಲು ಯತ್ನಿಸಿದರೆ ನೀವು ನಾನು ಎಣಿಸಿದ್ದಕ್ಕಿಂತಲೂ ಹೆಚ್ಚಿನ ಹೇಡಿಯಾಗುತ್ತೀರಿ’’ ಎಂದಿದ್ದರು.
ಇದೀಗ ಗುರುವಾರ ಟ್ರಂಪ್, ಹೈಡಿ ಕ್ರೂಝ್‌ರ ಫೋಟೊವೊಂದನ್ನು ಟ್ವೀಟ್ ಮಾಡಿದ್ದಾರೆ.
ಇದಕ್ಕೆ ಸುದ್ದಿಗಾರರೊಂದಿಗೆ ಖಾರವಾಗಿ ಪ್ರತಿಕ್ರಿಯಿಸಿರುವ ಕ್ರೂಝ್, ‘‘ನನ್ನನ್ನು ಹಿಮ್ಮೆಟ್ಟಿಸುವುದು ಸುಲಭವಲ್ಲ. ನಾನು ಕೋಪಗೊಳ್ಳುವುದು ಕಡಿಮೆ. ಆದರೆ, ನೀವು ನನ್ನ ಹೆಂಡತಿ ಮತ್ತು ಮಕ್ಕಳ ಜೊತೆಗೆ ಆಟವಾಡುತ್ತಿದ್ದೀರಿ. ಡೊನಾಲ್ಡ್, ನೀವೊಬ್ಬ ಅಸಹ್ಯ ಹೇಡಿ. ಹೈಡಿಯ ತಂಟೆಗೆ ಹೋಗಬೇಡಿ’’ ಎಂದು ಹೇಳಿದ್ದಾರೆ.