ತಲೆಯಲ್ಲಿ ಕೊಂಬು ಬೆಳೆದ ಸೋಲಿಗ ಮಹಿಳೆ ಮಾದಮ್ಮಗೆ ಚಿಕಿತ್ಸೆ
ವಾರ್ತಾಭಾರತಿ ವರದಿ ಫಲಶ್ರುತಿ

ಚಾಮರಾಜನಗರ, ಮಾ. 25: ಸೋಲಿಗ ಮಹಿಳೆ ಮಾದಮ್ಮರ ತಲೆಯಲ್ಲಿ ಕೊಂಬು ಮೂಡಿದ ಬಗ್ಗೆ ಇತ್ತೀಚೆಗೆ ವಾರ್ತಾಭಾರತಿ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿದ್ದು, ಇದಕ್ಕೆ ಸ್ಪಂದಿಸಿದ ಚಾಮರಾಜನಗರ ಜಿಲ್ಲಾ ಪರಿಶಿಷ್ಟ ವರ್ಗ ಕಲ್ಯಾಣ ಇಲಾಖೆಯು, ಮಾದಮ್ಮರಿಗೆ ಚಿಕಿತ್ಸೆ ನೀಡಲು ಮುಂದಾಗಿದೆ.
ಚಾಮರಾಜನಗರ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖಾಧಿಕಾರಿ ಸರಸ್ವತಿ, ಹೊಸಪೋಡಿಗೆ ಭೇಟಿ ಕೊಟ್ಟು ಕೊಂಬು ಬಂದಿರುವ ಮಾದಮ್ಮರೊಂದಿಗೆ ಚರ್ಚೆ ನಡೆಸಿ ವೈದ್ಯಕೀಯ ತಪಾಸಣೆಗೆ ಬರುವಂತೆ ಮನವೊಲಿಸುವಲ್ಲಿ ಯಶಸ್ವಿಯಾದರು.
ಅಧಿಕಾರಿಗಳ ಮನವಿ ಸ್ಪಂದಿಸಿದ ಮಾದಮ್ಮ ಚಿಕಿತ್ಸೆ ಪಡೆಯಲು ಸಮ್ಮತಿ ಸೂಚಿಸಿದರು. ಕೂಡಲೇ ಅಧಿಕಾರಿ ಸರಸ್ವತಿ ದೂರವಾಣಿ ಮೂಲಕ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ. ವಿಜಯ ಪಾಂಡನ್ ಅವರನ್ನು ಸಂಪರ್ಕಿಸಿ, ಮಾದಮ್ಮರ ತಲೆಯಲ್ಲಿ ಕೊಂಬು ಬಂದಿರುವ ಸಂಗತಿಯನ್ನು ವಿವರಿಸಿ, ಸೋಲಿಗ ಮಹಿಳೆಯ ಸಮಸ್ಯೆಯನ್ನು ಬಗೆಹರಿಸವಂತೆ ಸೂಚಿಸಿದರು.
ತೀವ್ರ ಸಂಕಷ್ಟದಲ್ಲಿರುವ ಮಾದಮ್ಮರಿಗೆ ಮನೆಯನ್ನು ನಿರ್ಮಾಣ ಮಾಡಿಕೊಡುವ ಬಗ್ಗೆ ಭರವಸೆ ನೀಡಿದ ಸರಸ್ವತಿ, ಮಾದಮ್ಮರ ಆರೋಗ್ಯ ಸುಧಾರಣೆಗೆ ಹೆಚ್ಚಿನ ಗಮನಹರಿಸುವುದಾಗಿ ಪತ್ರಿಕೆಗೆ ತಿಳಿಸಿದರು.
ಸೋಲಿಗ ಮಹಿಳೆ ಮಾದಮ್ಮರ ತಲೆಯಲ್ಲಿ ಕೊಂಬು ಬೆಳೆದಿರುವ ಬಗ್ಗೆ ಮಾರ್ಚ್ 23ರಂದು ವಾರ್ತಾಭಾರತಿ ವರದಿ ಮಾಡಿತ್ತು. ವರದಿಯ ಬಗ್ಗೆ ಅಧಿಕಾರಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಬಾಕ್ಸ್
ವಾರ್ತಾಭಾರತಿ ವರದಿಗೆ ಸಂಸದ ಶ್ಲಾಘನೆ
ಚಾಮರಾಜನಗರ: ಗುಡ್ಡಗಾಡಿನಲ್ಲಿ ವಾಸ ಮಾಡುತ್ತಿರುವ ಸೋಲಿಗ ಮಹಿಳೆ ಮಾದಮ್ಮರ ತಲೆಯಲ್ಲಿ ಬೆಳೆಯುತ್ತಿರುವ ಕೊಂಬಿನ ಬಗ್ಗೆ ವಾರ್ತಾಭಾರತಿಯಲ್ಲಿ ಪ್ರಕಟವಾದ ವರದಿಗೆ ಚಾಮರಾಜನಗರ ಲೋಕಸಭಾ ಸದಸ್ಯ ಆರ್.ಧ್ರುವನಾರಾಯಣ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಪತ್ರಿಕೆಯೊಂದಿಗೆ ಮಾತನಾಡಿದ ಸಂಸದ ಧ್ರುವನಾರಾಯಣ್, ಮಾದಮ್ಮರ ತಲೆಯಲ್ಲಿ ಬೆಳೆದಿರುವ ಕೊಂಬನ್ನು ಉಚಿತ ಶಸ್ತ್ರ ಚಿಕಿತ್ಸೆಯ ಮೂಲಕ ತೆಗೆಯುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು.







