ಮಾಜಿ ಗ್ರಾಪಂ ಸದಸ್ಯನ ಮೇಲೆ ಹಲ್ಲೆ
ಸಾಗರ, ಮಾ. 25: ಉಳ್ಳೂರು ಗ್ರಾಮ ಪಂಚಾಯತ್ ಸದಸ್ಯ ಅಂತೋನಿ ವಿ. ಫೆರ್ನಾಂಡಿಸ್ ಮಾ. 23ರಂದು ರಾತ್ರಿ ಜೋಗಿನಗದ್ದೆಯಲ್ಲಿರುವ ಅಂಗಡಿಗೆ ಸಾಮಗ್ರಿ ತರಲು ಹೋಗಿದ್ದ ನನ್ನ ಮೇಲೆ ಏಕಾಏಕಿ ಹಲ್ಲೆ ನಡೆಸಿ, ಮೊಬೈಲ್ ಕಸಿದುಕೊಂಡು ಅವರ ಮನೆಯಲ್ಲಿ ಕೂಡಿ ಹಾಕಿದ್ದರು ಎಂದು ಉಳ್ಳೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯ ನಾಗರಾಜ ಗೌಡ ಆರೋಪಿಸಿದ್ದಾರೆ.
ಶುಕ್ರವಾರ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನಿಂದಲೂ ಅಂತೋನಿ ಫರ್ನಾಂಡಿಸ್ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದು, ಇದನ್ನು ಪ್ರಶ್ನಿಸಿದವರ ಮೇಲೆ ಹಲ್ಲೆ ಮಾಡುವ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ ಎಂದು ಹೇಳಿದರು. 16ನೆ ಸಾಲಿನ 13 ಮತ್ತು 14ನೆ ಹಣಕಾಸು ಯೋಜನೆಯಲ್ಲಿ ಕ್ರಿಯಾಯೋಜನೆ ರೂಪಿಸುವಾಗ ಶೇ. 25ರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ವಿನಿಯೋಗಿಸಲಾಗಿರುವ ಹಣದಲ್ಲಿ ಭ್ರಷ್ಟಾಚಾರ ನಡೆದಿದೆ. ಇದನ್ನು ನಾನು ಗಮನಿಸಿ ಫಲಾನುಭವಿಗಳಿಗೆ ಆಗಿರುವ ಅನ್ಯಾಯವನ್ನು ಸಾರ್ವಜನಿಕವಾಗಿ ತಿಳಿಸಿರುವುದೆ ನನ್ನ ಮೇಲೆ ಹಲ್ಲೆಗೆ ಕಾರಣವಾಗಿದೆ ಎಂದು ತಿಳಿಸಿದರು.
ಹಲ್ಲೆ ನಡೆದ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳಿಗೆ ಹತ್ತಾರು ಬಾರಿ ಫೋನ್ ಮಾಡಿದರೂ ಯಾರೂ ಫೋನ್ ಸ್ವೀಕರಿಸಿಲ್ಲ. ಉಳ್ಳೂರು ಗ್ರಾಮ ಪಂಚಾತಯತ್ ವ್ಯಾಪ್ತಿಯಲ್ಲಿ ಅಂತೋನಿ ಫೆರ್ನಾಂಡಿಸ್ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ಫಲಾನುಭವಿಗಳಿಗೆ ಭಯದ ವಾತಾವರಣ ಸೃಷ್ಟಿಸಿರುತ್ತಾರೆ. ಅಂತೋನಿ ಫೆರ್ನಾಂಡಿಸ್ ಪ್ರತಿನಿಧಿಸುವ ವ್ಯಾಪ್ತಿಯಲ್ಲಿ ದೊಡ್ಡಮಟ್ಟದ ಅವ್ಯವಹಾರವಾಗಿದ್ದು, ಸೂಕ್ತ ತನಿಖೆ ನಡೆಸಬೇಕು ಹಾಗೂ ನನ್ನ ಮೇಲೆ ಹಲ್ಲೆ ಮಾಡಿರುವ ವಿರುದ್ಧ ತಕ್ಷಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಗ್ರಾಮ ಪಂಚಾಯತ್ ಮಾಜಿ ಸದಸ್ಯ ಮುರಳಿಧರ ಮಂಚಾಲೆ ಮಾತನಾಡಿ, ಪದೇಪದೇ ಹಲ್ಲೆಯಂತಹ ಚಟುವಟಿಕೆಗಳಲ್ಲಿ ಪಾಲ್ಗೊಂಡು ಜನರನ್ನು ತಮ್ಮ ಮುಷ್ಟಿಯಲ್ಲಿ ಇರಿಸಿಕೊಂಡು, ಊರಿನಲ್ಲಿ ಅಶಾಂತಿ ಉಂಟು ಮಾಡುತ್ತಿರುವ ಅಂತೋನಿ ಫರ್ನಾಂಡಿಸ್ ಅವರ ಸದಸ್ಯತ್ವವನ್ನು ರದ್ದು ಮಾಡಬೇಕು. ಹಲ್ಲೆಗೆ ಒಳಗಾಗಿರುವ ನಾಗರಾಜ ಗೌಡ ಅವರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು. ಗೋಷ್ಟಿಯಲ್ಲಿ ನಾಗಪ್ಪ ಕಾನುಗೋಡು, ಬಸವರಾಜ್, ಮಂಜುನಾಥ್ ಕಾನುಗೋಡು ಮತ್ತಿತರರು ಉಪಸ್ಥಿತರಿದ್ದರು.







