ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಇಬ್ಬರ ಶವ ಪತ್ತೆ
ಚಿಕ್ಕಮಗಳೂರು, ಮಾ.25: ಯುವಕ ಹಾಗೂ ಯುವತಿ ಇಬ್ಬರು ನಗರದ ಐ.ಜಿ.ರಸ್ತೆಯ ಪ್ರತಿಷ್ಠಿತ ರಾಜ್‌ಮಹಲ್ ಲಾಡ್ಜ್‌ನ ವಾಸ್ತವ್ಯದ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಕೊಳೆತ ಸ್ಥಿತಿಯಲ್ಲಿ ಶವಗಳು ಶುಕ್ರವಾರ ಪತ್ತೆಯಾಗಿವೆ.
ನೇಣಿಗೆ ಶರಣಾದವರನ್ನು ಶಿವಮೊಗ್ಗ ಜಿಲ್ಲೆ ಒಟಿ ರಸ್ತೆ, ಭಾರತಿ ಕಾಲನಿಯ ನವೀನ್ ಹಾವೇರಿ(33) ಮತ್ತು ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಷಡಕ್ಷರಿ ಎಂಬವರ ಪುತ್ರಿ ಪ್ರಿಯಾ(18) ಎಂದು ಗುರುತಿಸಲಾಗಿದೆ. ಇಂದು ಬೆಳಗ್ಗೆ ಕೊಠಡಿಯೊಳಗಿನಿಂದ ತೀವ್ರ ದುರ್ನಾತ ಬೀರುತ್ತಿರುವುದು ಕಂಡು ಬಂದಾಗ ಲಾಡ್ಜ್‌ನ ಸಿಬ್ಬಂದಿ ಬಾಗಿಲು ತೆರೆಯಲು ಬಡಿದರಾದರೂ ಒಳಗಿನಿಂದ ಬಾಗಿಲು ಬೋಲ್ಟ್ ಹಾಕಿರುವುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಸ್ಥಳಕ್ಕೆ ಬಂದ ನಗರ ಪೊಲೀಸರು ಕೊಠಡಿಯ ಬಾಗಿಲು ಮುರಿದು ನೋಡಿದಾಗ ಇಬ್ಬರು ಒಂದೇ ಪ್ಯಾನ್‌ಗೆ ವೇಲ್‌ನಿಂದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಈ ಇಬ್ಬರು ಮಾ. 23ರಂದು ನಗರದ ಪ್ರತಿಷ್ಠಿತ ರಾಜ್‌ಮಹಲ್ ಲಾಡ್ಜ್ ನಲ್ಲಿ ಕೊಠಡಿ ಪಡೆದಿದ್ದರು. ಎರಡು ದಿನಗಳ ಹಿಂದೆಯೇ ನೇಣು ಹಾಕಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ನವೀನ್ ಖಾಸಗಿ ವಾಹಿನಿಯೊಂದರಲ್ಲಿ ಕ್ಯಾಮರಾ ಮ್ಯಾನ್ ಆಗಿದ್ದರೆ, ಪ್ರಿಯಾ ಶಿವಮೊಗ್ಗದ ಕಾಲೇಜೊಂದರಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಯಾಗಿದ್ದರು.
ಈ ಕುರಿತು ಬೆಂಗಳೂರಿನ ಬ್ಯಾಟರಾಯನ ಪುರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಆತ್ಮಹತ್ಯೆ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.





