ದಲಿತರ ಹೆಸರಿನಲ್ಲಿ ಹಣ ಸುಲಿಗೆ ಮಾಡಿದರೆ ದೂರು ನೀಡಿ: ದಲಿತ ಸಂಘರ್ಷ ಸಮಿತಿ

ಮಡಿಕೇರಿ, ಮಾ.25: ದಲಿತರ ಹೆಸರಿನಲ್ಲಿ ಯಾವುದಾದರೂ ಸಂಘಟನೆಗಳು ಅಥವಾ ಮುಖಂಡರುಗಳು ಎಂದು ಹೇಳಿಕೊಂಡವರು ಹಣ ಸುಲಿಗೆಗೆ ಮುಂದಾದರೆ ಮತ್ತು ಬ್ಲಾಕ್ ಮೇಲ್ ತಂತ್ರ ಅನುಸರಿಸುತ್ತಿದ್ದರೆ ತಕ್ಷಣ ಪೊಲೀಸರಿಗೆ ದೂರು ನೀಡುವಂತೆ ಕೃಷ್ಣಪ್ಪ ಸ್ಥಾಪಿತ ದಲಿತ ಸಂಘರ್ಷ ಸಮಿತಿ ತಿಳಿಸಿದೆ.
ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ವಿಭಾಗೀಯ ಸಂಚಾಲಕ ಎನ್.ವೀರಭದ್ರಯ್ಯ, ದಲಿತರ ಹೆಸರು ಹೇಳಿಕೊಂಡು ಹಣ ಸಂಗ್ರಹಿಸುವುದು ಅಪರಾಧವಾಗಿದ್ದು, ಕೃಷ್ಣಪ್ಪಸ್ಥಾಪಿತ ದಲಿತ ಸಂಘರ್ಷ ಇದಕ್ಕೆ ಹೊಣೆಯಲ್ಲವೆಂದು ಸ್ಪಷ್ಟಪಡಿಸಿದರು.
ಇತ್ತೀಚಿನ ದಿನಗಳಲ್ಲಿ ದಲಿತ ಸಂಘರ್ಷ ಸಮಿತಿಯ ಹೆಸರಿನಲ್ಲಿ ನಾಯಿಕೊಡೆಗಳಂತೆ ಸಂಘಟನೆಗಳು ಹುಟ್ಟಿಕೊಳ್ಳುತ್ತಿದ್ದು, ಮೂಲ ಸಂಘಟನೆಯಾದ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಕೃಷ್ಣಪ್ಪ ಸ್ಥಾಪಿತ) ಸಂಘಟನೆಯ ಗೌರವಕ್ಕೆ ಕೆಲವರು ಧಕ್ಕೆ ತರುತ್ತಿದ್ದಾರೆ. ಇದರಲ್ಲಿ ಪ್ರಮುಖವಾಗಿ ದಲಿತ ಸಂಘರ್ಷ ಸಮಿತಿ(ಭೀಮಾವಾದ)ಎಂದು ಹೇಳಿಕೊಂಡು ಕಾರ್ಯಾಚರಿಸುತ್ತಿದ್ದ ಸಂಘಟನೆಯ ಬಣ್ಣ ಇದೀಗ ಬಯಲಾಗಿದೆ. ಈ ಸಂಘಟನೆಯ ಮುಖಂಡನೆಂದು ಹೇಳಿಕೊಂಡು ಅಮಾಯಕರಿಗೆ ಸೈಟ್ ನೀಡುವ ಆಮಿಷವೊಡ್ಡುತ್ತಿದ್ದ ವಿಜಯಕುಮಾರ್ ಎಂಬಾತ ಅಕ್ರಮವಾಗಿ ಹಣ ಸಂಗ್ರಹಿಸಿ ಇದೀಗ ಬಂಧನಕ್ಕೆ ಒಳಗಾಗಿದ್ದಾನೆ. ಬೆಳವಣಿಗೆಯಿಂದ ಸಮಾಜದಲ್ಲಿ ಗೊಂದಲ ಸೃಷ್ಟಿಯಾಗಿದ್ದು, ದಲಿತ ಸಂಘರ್ಷ ಸಮಿತಿಯ ಹೆಸರಿನ ಸಂಘಟನೆಗಳನ್ನು ಸಂಶಯದಿಂದ ನೋಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.
ಜಿಲ್ಲಾ ಸಂಚಾಲಕ ಎಚ್.ಎಲ್.ದಿವಾಕರ್ ಮಾತನಾಡಿ, ಕೃಷ್ಣಪ್ಪಸ್ಥಾಪಿತ ದಲಿತ ಸಂಘರ್ಷ ಸಮಿತಿ ಜನಪರ ಕಾಳಜಿಯ ಏಕೈಕ ಸಂಘಟನೆಯಾಗಿದ್ದು, ಸಂಘಟನೆ ತನ್ನ ಸ್ವಂತ ಖರ್ಚಿನಲ್ಲಿ ಹೋರಾಟಗಳನ್ನು ನಡೆಸಿದೆ. ಇತ್ತೀಚೆಗೆ ಕೆಲವು ಸಂಘಟನೆಗಳು ಬೆರಳೆಣಿಕೆಯಷ್ಟು ಸದಸ್ಯರನ್ನು ಹೊಂದಿ ಕೇವಲ ಪತ್ರಿಕಾ ಹೇಳಿಕೆಗಳನ್ನು ನೀಡಿ ಹಣ ಗಳಿಸುತ್ತಿವೆ. ಈ ಹಿಂದೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ದಲಿತ ಸಂಘಟನೆಗಳ ಸಭೆ ನಡೆಸಿದ ಸಂದರ್ಭ ದಲಿತರಿಂದಲೆ ದಲಿತರಿಗೆ ಅನ್ಯಾಯ ಮತ್ತು ಶೋಷಣೆಯಾಗುತ್ತಿದ್ದು, ತನಿಖೆ ನಡೆಸುವಂತೆ ಒತ್ತಾಯಿಸಲಾಗಿತ್ತು. ಆದರೆ ಅಧಿಕಾರಿಗಳು ಯಾವುದೇ ಸ್ಪಂದನ ನೀಡದ ಕಾರಣ ಇತ್ತೀಚಿನ ದಿನಗಳಲ್ಲಿ ಅಧಿಕಾರಿಗಳ ಕಾಟಾಚಾರದ ಸಭೆಯಲ್ಲಿ ಪಾಲ್ಗೊಳ್ಳ್ಳುತ್ತಿಲ್ಲವೆಂದು ತಿಳಿಸಿದರು.ಯಾವುದೇ ಕಾರಣಕ್ಕೂ ದಲಿತರ ಹೆಸರಿನಲ್ಲಿ ಹಣ ಸಂಗ್ರಹಿಸುವವರಿಗೆ ಹಣ ನೀಡಬಾರದೆಂದು ದಿವಾಕರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಸಂಘಟನಾ ಸಂಚಾಲಕರಾದ ಎಚ್.ಎ. ರವಿ, ಸಾವಿತ್ರಿ, ಡಿ.ಸಿ. ಸೋಮಣ್ಣ ಹಾಗೂ ಖಜಾಂಚಿ ಆರ್. ಶ್ವೇತಾ ಉಪಸ್ಥಿತರಿದ್ದರು.







