ಪಿಡಿಪಿಗೆ ಬೆಂಬಲ ಬಿಜೆಪಿ ಅಧಿಕೃತ ಘೋಷಣೆ

ಮೆಹಬೂಬ ಸಿಎಂ, ಬಿಜೆಪಿಯ ನಿರ್ಮಲ್ ಸಿಂಗ್ ಡಿಸಿಎಂ
ಜಮ್ಮು,ಮಾ.25: ಜಮ್ಮುಕಾಶ್ಮೀರದ ಅತಂತ್ರ ರಾಜಕೀಯ ಸನ್ನಿವೇಶವು ಕೊನೆಗೊಳ್ಳುವ ಸಾಧ್ಯತೆ ಗಳು ಗೋಚರಿಸುತ್ತಿದ್ದು, ಬಿಜೆಪಿಯ ಶಾಸಕಾಂಗ ಪಕ್ಷವು ಪಿಡಿಪಿ ಜೊತೆಗೂಡಿ ಸರಕಾರವನ್ನು ರಚಿಸಲು ಶುಕ್ರವಾರ ಅವಿರೋಧವಾಗಿ ನಿರ್ಧ ರಿಸಿದೆ ಹಾಗೂ ಪಿಡಿಪಿಯ ಮುಖ್ಯಮಂತ್ರಿ ಅಭ್ಯರ್ಥಿ ಮೆಹಬೂಬ ಮುಫ್ತಿ ಅವರಿಗೆ ಬೆಂಬಲವನ್ನು ಘೋಷಿಸಿದೆ.
ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ಉಪ ಮುಖ್ಯಮಂತ್ರಿ ನಿರ್ಮಲ್‌ಸಿಂಗ್ ಅವರನ್ನು ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ನಾಗಿಯೂ ಸಭೆಯಲ್ಲಿ ಆಯ್ಕೆ ಮಾಡಲಾಯಿತು.
ಉಪಮುಖ್ಯಮಂತ್ರಿ ಹುದ್ದೆಗೆ ತನ್ನ ಅಭ್ಯರ್ಥಿ ಯನ್ನಾಗಿ ಅವರನ್ನು ಆಯ್ಕೆ ಮಾಡಿದೆ. ಮುಫ್ತಿ ಮುಹಮ್ಮದ್ ಸಯೀದ್ ನೇತೃತ್ವದ ಪಿಡಿಪಿ-ಬಿಜೆಪಿ ಮೈತ್ರಿ ಸರಕಾರದಲ್ಲಿಯೂ ನಿರ್ಮಲ್‌ಸಿಂಗ್ ಉಪಮುಖ್ಯಮಂತ್ರಿಯಾಗಿದ್ದರು.
‘‘ರಾಜ್ಯದಲ್ಲಿ ಸರಕಾರ ರಚನೆಗಾಗಿ ಪಿಡಿಪಿಯನ್ನು ಬೆಂಬಲಿಸಲು ಬಿಜೆಪಿಯ ಶಾಸಕಾಂಗಪಕ್ಷವು ನಿರ್ಧರಿಸಿದೆ. ಶೀಘ್ರದಲ್ಲೇ ಪಿಡಿಪಿ ಹಾಗೂ ಬಿಜೆಪಿ ಜೊತೆಯಾಗಿ ರಾಜ್ಯಪಾಲರನ್ನು ಭೇಟಿಯಾಗಲಿದ್ದು, ಸರಕಾರ ರಚನೆಗೆ ಹಕ್ಕು ಮಂಡಿಸಲಿವೆ’’ ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್‌ಮಾಧವ್ ಸಭೆಯ ಬಳಿಕ ಸುದ್ದಿಗಾರರಿಗೆ ತಿಳಿಸಿದ್ದಾರೆ.
ನೂತನ ಸರಕಾರದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಮೆಹಬೂಬಮುಫ್ತಿ ಅವರನ್ನು ಪಕ್ಷ ಬೆಂಬಲಿಸಲಿದೆಯೆಂದು ಜಮ್ಮುಕಾಶ್ಮೀರದ ಬಿಜೆಪಿ ಅಧ್ಯಕ್ಷ ಸತ್‌ಶರ್ಮಾ ತಿಳಿಸಿದ್ದಾರೆ.







