ಪಿಯುಸಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ: ಮುಖ್ಯೋಪಾಧ್ಯಾಯ ಸಹಿತ ಹಲವರು ಭಾಗಿ ಶಂಕೆ

ಬೆಂಗಳೂರು, ಮಾ.25: ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಪ್ರೌಢಶಾಲೆಯೊಂದರ ಮುಖ್ಯೋಪಾಧ್ಯಾಯ, ಶಿಕ್ಷಕ, ಭದ್ರತಾ ಸಿಬ್ಬಂದಿಗಳೊಂದಿಗೆ 520ಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳು ಭಾಗಿಯಾಗಿರುವುದು ಸಿಐಡಿ ಅವರಿಗೆ ಮೇಲ್ನೋಟಕ್ಕೆ ಕಂಡು ಬಂದಿದೆ.
ಡಿಐಜಿ ಸೋನಿಯಾ ನಾರಂಗ್ ನೇತೃತ್ವದ ಸಿಐಡಿ ಅಧಿಕಾರಿಗಳ ವಿಶೇಷ ತಂಡಗಳು ಪ್ರಕರಣದಲ್ಲಿ ಭಾಗಿಯಾದವರಿಗಾಗಿ ಬಲೆ ಬೀಸಿದ್ದವು. ಇದರಲ್ಲಿ ಮುಖ್ಯೋಪಾಧ್ಯಾಯರು ಸೇರಿ 520ಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳು ಭಾಗಿಯಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಸದ್ಯ ಸಿಐಡಿ ಅಧಿಕಾರಿಗಳು ಮುಖ್ಯೋಪಾಧ್ಯಾಯ, ಶಿಕ್ಷಕ, ಭದ್ರತಾ ಸಿಬ್ಬಂದಿಯನ್ನು ಮಾತ್ರ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.
ಸೋರಿಕೆಯಾದ ಪ್ರಶ್ನೆ ಪತ್ರಿಕೆಯನ್ನು ಹಲವು ವಿದ್ಯಾರ್ಥಿಗಳು ವಾಟ್ಸ್‌ಆ್ಯಪ್‌ನಿಂದ ಪಡೆದು ಪರೀಕ್ಷೆ ಬರೆದಿರುವುದು ಪತ್ತೆಯಾಗಿದ್ದರೂ ಸಿಐಡಿ ಅವರು ಪರೀಕ್ಷೆ ನಡೆಯುತ್ತಿರುವುದರಿಂದ ಯಾವೊಬ್ಬ ವಿದ್ಯಾರ್ಥಿಯನ್ನೂ ವಿಚಾರಣೆಗಾಗಿ ವಶಕ್ಕೆ ಪಡೆದುಕೊಂಡಿಲ್ಲ. ಆದರೆ, ಪರೀಕ್ಷೆ ಮುಗಿದ ಬಳಿಕ ಈ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗುತ್ತದೆ ಎನ್ನಲಾಗುತ್ತಿದೆ.
ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆಯು ಮೊದಲಿಗೆ ಬಳ್ಳಾರಿ ಹಾಗೂ ಕೋಲಾರಗಳಲ್ಲಿ ಸೋರಿಕೆಯಾಗಿದೆ ಎಂದು ಹೇಳಲಾಗಿತ್ತಾದರೂ ಸೋರಿಕೆಯಾದ ಪ್ರಶ್ನೆಗಳು ವಾಟ್ಸ್‌ಆ್ಯಪ್ ಮೂಲಕ ಎಲ್ಲ ಕಡೆ ಹರಿದಾಡಿವೆ.
ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆಗಳ ಪೈಕಿ 37 ಪ್ರಶ್ನೆಗಳ ಪೈಕಿ 36 ಪ್ರಶ್ನೆಗಳು ಸೋರಿಕೆಯಾಗಿವೆ. ತನಿಖೆಯಲ್ಲಿ ಪ್ರಶ್ನೆ ಪತ್ರಿಕೆ ನೇರವಾಗಿ ಸಿಕ್ಕಿರುವವರು ಎಲ್ಲೂ ಕಂಡು ಬಂದಿಲ್ಲ. ಆದರೆ, ಪ್ರಶ್ನೆಗಳು ಕೈಬರಹದಲ್ಲಿ ಇರುವುದು ವಾಟ್ಸ್‌ಆ್ಯಪ್‌ನಲ್ಲಿ ಕಳುಹಿಸಲಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಹಿಂದಿನ ಪ್ರಕರಣಗಳನ್ನು ಪರಿಶೀಲಿಸಿರುವ ಸಿಐಡಿ ಅಧಿಕಾರಿಗಳು, ಈ ಬಾರಿಯ ಪರೀಕ್ಷಾ ಪ್ರಕ್ರಿಯೆಯ ಸಂಪೂರ್ಣ ಅಧ್ಯಯನ ನಡೆಸಿ ಸೋರಿಕೆಯಾಗಿರುವುದನ್ನು ಪತ್ತೆ ಹಚ್ಚಲು ತೊಡಗಿದ್ದಾರೆ.
ಪ್ರಕರಣದಲ್ಲಿ ಭಾಗಿಯಾಗಿರುವ ಕೆಲವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಬಹುದು. ಆದರೆ, ಇಲ್ಲಿಯವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ಸಿಐಡಿಯ ಪೊಲೀಸ್ ಮಹಾನಿರ್ದೇಶಕ ಕಿಶೋರ್‌ಚಂದ್ರ ತಿಳಿಸಿದ್ದಾರೆ.







