ನಿರಾಶ್ರಿತರ ಪಾದ ತೊಳೆದ ಪೋಪ್

ಕ್ಯಾಸಲ್‌ನುವೊ ಡಿ ಪೋರ್ಟೊ, ಮಾ.25: ಪೋಪ್ ಫ್ರಾನ್ಸಿಸ್ ಅವರು ಪವಿತ್ರ ಗುರುವಾರದಂದು ಇಲ್ಲಿ ಮುಸ್ಲಿಮ್, ಕ್ರಿಶ್ಚಿಯನ್ ಮತ್ತು ಹಿಂದೂ ನಿರಾಶ್ರಿತರ ಪಾದಗಳನ್ನು ತೊಳೆದು ಚುಂಬಿಸಿದರು. ನಾವೆಲ್ಲರೂ ಒಂದೇ ದೇವರ ಮಕ್ಕಳು ಎಂದು ಪೋಪ್ ಈ ಸಂದರ್ಭದಲ್ಲಿ ಘೋಷಿಸಿದರು.
ಬ್ರಸೆಲ್ಸ್ ದಾಳಿಗಳ ಬಳಿಕ ಮುಸ್ಲಿಮ್ ವಿರೋಧಿ ಭಾವನೆಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಭ್ರಾತೃತ್ವದ ಸಂದೇಶವನ್ನು ಸಾರುವ ಮೂಲಕ ಗಮನ ಸೆಳೆದರು.
ರೋಮ್‌ನ ಹೊರವಲಯದಲ್ಲಿನ ಕ್ಯಾಸಲ್‌ನುವೊ ಡಿ ಪೋರ್ಟೊದಲ್ಲಿನ ನಿರಾಶ್ರಿತರ ಶಿಬಿರದಲ್ಲಿ ಈಸ್ಟರ್ ಸಪ್ತಾಹದ ಪ್ರಾರ್ಥನಾ ಸಭೆಯಲ್ಲಿ ಪಾಲ್ಗೊಂಡಿದ್ದ ಪೋಪ್ ಅವರು, ಬ್ರಸೆಲ್ಸ್ ನರಮೇಧವನ್ನು ರಕ್ತಪಿಪಾಸುಗಳು ನಡೆಸಿರುವ ‘ಯುದ್ಧ’ದ ದ್ಯೋತಕವೆಂದು ಖಂಡಿಸಿದರು.
ಪವಿತ್ರ ಗುರುವಾರದಂದು ಯೇಸು ಕ್ರಿಸ್ತರು ಶಿಲುಬೆಗೇರುವ ಮುನ್ನ ತನ್ನ ಶಿಷ್ಯರ ಪಾದಗಳನ್ನು ತೊಳೆದಿದ್ದ ವಿಧಿಯನ್ನು ಪುನರಾವರ್ತಿಸಲಾಗುತ್ತದೆ. ಇದು ಸೇವೆಯ ದ್ಯೋತಕವಾಗಿದೆ. ಇದಕ್ಕೆ ವಿರುದ್ಧವಾಗಿ ಬ್ರಸೆಲ್ಸ್ ದಾಳಿಯು ವಿನಾಶದ ದ್ಯೋತಕವಾಗಿದೆ ಎಂದ ಪೋಪ್, ಅವರು ವಲಸಿಗರು ಪ್ರತಿನಿಧಿಸುತ್ತಿರುವ ಮಾನವತೆಯ ಭ್ರಾತೃತ್ವವನ್ನು ನಾಶಗೊಳಿಸಲು ಬಯಸಿದ್ದಾರೆ ಎಂದರು.
ನಾವು ವಿಭಿನ್ನ ಸಂಸ್ಕೃತಿಗಳು ಮತ್ತು ಧರ್ಮಗಳನ್ನು ಹೊಂದಿದ್ದೇವೆ. ಆದರೆ ನಾವೆಲ್ಲ ಸಹೋದರರಾಗಿದ್ದೇವೆ ಮತ್ತು ಶಾಂತಿಯಿಂದ ಬದುಕಲು ಬಯಸಿದ್ದೇವೆ ಎಂದು ಅವರು ಹೇಳಿದರು.
ಪೋಪ್ ಫ್ರಾನ್ಸಿಸ್ ಅವರು ತಮ್ಮ ಮುಂದೆ ಮಂಡಿಯೂರಿ ಹಿತ್ತಾಳೆಯ ಗಿಂಡಿಯಿಂದ ಪವಿತ್ರ ಜಲವನ್ನು ತಮ್ಮ ಪಾದಗಳ ಮೇಲೆ ಎರೆದು ಅವುಗಳನ್ನು ಸ್ವಚ್ಛಗೊಳಿಸಿದಾಗ ಹಲವಾರು ವಲಸಿಗರು ಕಂಬನಿಗರೆದರು.
ಈ ವಿಧಿಯಲ್ಲಿ ನಾಲ್ವರು ಮಹಿಳೆಯರು ಮತ್ತು ಎಂಟು ಪುರುಷರು ಭಾಗಿಯಾಗಿದ್ದರು. ಮಹಿಳೆಯರು ಕ್ರೈಸ್ತರಾಗಿದ್ದು,ಓರ್ವರು ಇಟಲಿಯವರಾಗಿದ್ದರೆ ಇತರ ಮೂವರು ಇರಿಟ್ರಿಯಾದವರಾಗಿದ್ದರು. ಪುರುಷರಲ್ಲಿ ನೈಜೀರೀಯಾದ ನಾಲ್ವರು ಕ್ರೈಸ್ತರು,ಮಾಲಿ,ಸಿರಿಯಾ ಮತ್ತು ಪಾಕಿಸ್ತಾನದ ತಲಾ ಓರ್ವ ಮುಸ್ಲಿಮರು ಮತ್ತು ಭಾರತದ ಓರ್ವ ಹಿಂದೂ ಸೇರಿದ್ದರು.
ಪ್ರಾರ್ಥನಾ ಸಭೆಗೆ ಪೋಪ್ ನಡೆದು ಬಂದಾಗ ವಿವಿಧ ಭಾಷೆಗಳಲ್ಲಿ ‘ಸುಸ್ವಾಗತ’ ಎಂದು ಬರೆಯಲಾಗಿದ್ದ ಬ್ಯಾನರ್ ಅವರಿಗಾಗಿ ಕಾಯುತ್ತಿತ್ತು. ಆದರೆ ಶಿಬಿರದಲ್ಲಿ ಆಶ್ರಯ ಪಡೆದಿರುವ 892 ನಿರಾಶ್ರಿತರ ಪೈಕಿ ಕೆಲವೇ ಜನರು ಸಭೆಯಲ್ಲಿ ಭಾಗವಹಿಸಿದ್ದು,ಹೆಚ್ಚಿನ ಆಸನಗಳು ಖಾಲಿಯಾಗಿದ್ದವು.







