ಸ್ವದೇಶಕ್ಕೆ ನಿವೃತ್ತಿ ನಿರ್ಧಾರ ಘೋಷಿಸುವೆ: ಅಫ್ರಿದಿ

ಮೊಹಾಲಿ, ಮಾ.25: ಪ್ರಸ್ತುತ ನಡೆಯುತ್ತಿರುವ ಟ್ವೆಂಟಿ-20 ವಿಶ್ವಕಪ್‌ನ ನಂತರ ನಿವೃತ್ತಿಯಾಗುತ್ತೇನೆ ಎಂದು ಇತ್ತೀಚೆಗಷ್ಟೇ ಸ್ಪಷ್ಟನೆ ನೀಡಿದ್ದ ಪಾಕಿಸ್ತಾನದ ನಾಯಕ ಶಾಹಿದ್ ಅಫ್ರಿದಿ ಮತ್ತೊಮ್ಮೆ ಉಲ್ಟಾ ಹೊಡೆದಿದ್ದಾರೆ.
ನಾನು ನಿವೃತ್ತಿಯ ಬಗ್ಗೆ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ. ನನ್ನ ದೇಶದ ಕ್ರಿಕೆಟ್ ಅಭಿಮಾನಿಗಳ ಮುಂದೆ ನಿವೃತ್ತಿ ಘೋಷಿಸುತ್ತೇನೆ ಎಂದು ಆಸ್ಟ್ರೇಲಿಯ ವಿರುದ್ಧದ ವಿಶ್ವಕಪ್‌ನ ಪಂದ್ಯದ ವೇಳೆ ಅಫ್ರಿದಿ ತಿಳಿಸಿದ್ದಾರೆ.
ಅಫ್ರಿದಿ ತನ್ನ ನಿವೃತ್ತಿಗೆ ಸಂಬಂಧಿಸಿ ಗೊಂದಲಕಾರಿ ಹೇಳಿಕೆ ನೀಡುತ್ತಿದ್ದಾರೆ. ಇತ್ತೀಚೆಗೆ ಹೇಳಿಕೆ ನೀಡಿದ್ದ ಅವರು ಆಸ್ಟ್ರೇಲಿಯ ವಿರುದ್ಧ ಶುಕ್ರವಾರ ನಡೆಯಲಿರುವ ಪಂದ್ಯದ ಬಳಿಕ ವಿದಾಯ ಹೇಳುವುದಾಗಿ ತಿಳಿಸಿದ್ದರು. ವಿಶ್ವಕಪ್‌ನ ನಂತರ ಅಫ್ರಿದಿಯನ್ನು ನಾಯಕತ್ವದಿಂದ ವಜಾಗೊಳಿಸಲಾಗುವುದು ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯಸ್ಥರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ.
36ರ ಹರೆಯದ ಅಫ್ರಿದಿ 1996ರಲ್ಲಿ ಕೀನ್ಯ ತಂಡದ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆಗೈದಿದ್ದರು.
ಕಾಶ್ಮೀರ ಜನತೆಗೆ ಕೃತಜ್ಞತೆ ಸಲ್ಲಿಸಿದ ಅಫ್ರಿದಿ
ಮೊಹಾಲಿ, ಮಾ.25: ಕಳೆದ ಪಂದ್ಯದಲ್ಲಿ ಕಾಶ್ಮೀರದ ವಿಷಯ ಮಾತನಾಡಿ ಟೀಕೆಗೆ ಗುರಿಯಾಗಿದ್ದ ಪಾಕಿಸ್ತಾನದ ನಾಯಕ ಶಾಹಿದ್ ಅಫ್ರಿದಿ ಶುಕ್ರವಾರ ಆಸ್ಟ್ರೇಲಿಯ ವಿರುದ್ಧದ ವಿಶ್ವಕಪ್ ಪಂದ್ಯದ ನಂತರ ಮತ್ತೊಮ್ಮೆ ಕಾಶ್ಮೀರ ಕಣಿವೆಯ ಜನತೆಯ ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಿದರು.
‘‘ನಮಗೆ ಭಾರತ ವಿರುದ್ಧದ ಪಂದ್ಯದ ವೇಳೆ ಬೆಂಬಲ ನೀಡಿದ್ದ ಕೋಲ್ಕತಾ ಜನರಿಗೆ ಕೃತಜ್ಞತೆ ಸಲ್ಲಿಸಲು ಬಯಸುವೆ. ಪಾಕಿಸ್ತಾನ ಹಾಗೂ ಕಾಶ್ಮೀರದಿಂದ ಮೊಹಾಲಿಗೆ ಬಂದು ನಮ್ಮನ್ನು ಬೆಂಬಲಿಸಿದವರಿಗೂ ಆಭಾರಿಯಾಗಿರುವೆ. ಭಾರತದಲ್ಲಿ ನಮ್ಮನ್ನು ಚೆನ್ನಾಗಿ ನೋಡಿಕೊಂಡಿರುವ ಬಿಸಿಸಿಐಗೆ ಕೃತಜ್ಞತೆ ಸಲ್ಲಿಸುವೆ’’ ಎಂದು ಪಂದ್ಯ ನಂತರ ನಡೆದ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಅಫ್ರಿದಿ ಹೇಳಿದ್ದಾರೆ.
ನ್ಯೂಝಿಲೆಂಡ್ ವಿರುದ್ಧ ಮೊಹಾಲಿಯಲ್ಲಿ ನಡೆದಿದ್ದ ಪಂದ್ಯದ ವೇಳೆ ಕಾಶ್ಮೀರಿ ಜನತೆಗೆ ಕೃತಜ್ಞತೆ ಸಲ್ಲಿಸಿದ್ದ ಅಫ್ರಿದಿ ಅವರ ನಿಲುವನ್ನು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಟೀಕಿಸಿದ್ದರು. ಅಫ್ರಿದಿಯ ಹೇಳಿಕೆ ರಾಜಕೀಯ ದೃಷ್ಟಿಕೋನದಿಂದ ಸರಿಯಿಲ್ಲ ಎಂದು ಠಾಕೂರ್ ಹೇಳಿದ್ದರು







