ಉಡುಪಿ ಜಿಲ್ಲಾದ್ಯಂತ ಕ್ರೈಸ್ತರಿಂದ ಗುಡ್‌ಫ್ರೈಡೆ ಆಚರಣೆ

ಉಡುಪಿ, ಮಾ.25: ಯೇಸುಕ್ರಿಸ್ತರನ್ನು ಶಿಲುಬೆ ಗೇರಿಸಿದ ದಿನವನ್ನು ನೆನಪಿಸುವ ಶುಭ ಶುಕ್ರ ವಾರ(ಗುಡ್‌ಫ್ರೈಡೆ)ವನ್ನು ಜಿಲ್ಲಾದ್ಯಂತ ಕ್ರೈಸ್ತರು ಉಪವಾಸ, ಪ್ರಾರ್ಥನೆ, ಧ್ಯಾನದೊಂದಿಗೆ ಶ್ರದ್ಧಾಭಕ್ತಿ ಯಿಂದ ಆಚರಿಸಿದರು.
ಜಿಲ್ಲೆಯ ವಿವಿಧ ಚರ್ಚ್‌ಗಳಲ್ಲಿ ಯೇಸುವಿನ ಶಿಲುಬೆಯ ಹಾದಿ(ವೇ ಆಫ್ ಕ್ರಾಸ್) ನೆನೆಯುವು ದರೊಂದಿಗೆ ವಿಶೇಷ ಪ್ರಾರ್ಥನಾ ವಿಧಿಗಳು ನೆರವೇರಿದವು. ಯೇಸುವಿನ ಬೃಹತ್ ಪ್ರತಿಮೆಯನ್ನು ಮೆರವಣಿಗೆಯಲ್ಲಿ ಕೊಂಡೊಯ್ದು ಪ್ರಾರ್ಥನೆ ಸಲ್ಲಿಸಲಾಯಿತು.
ಜಿಲ್ಲೆಯ ಪ್ರಮುಖ ಧಾರ್ಮಿಕ ವಿಧಿವಿಧಾನಗಳು ಮಿಲಾಗ್ರಿಸ್ ಕ್ಯಾಥಡ್ರಲ್ ಕಲ್ಯಾಣಪುರದಲ್ಲಿ ಉಡುಪಿ ಧರ್ಮಾಧ್ಯಕ್ಷ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ನೇತೃತ್ವದಲ್ಲಿ ಜರಗಿದವು. ಮಿಲಾಗ್ರಿಸ್ ಕ್ಯಾಥಡ್ರಲ್‌ನ ರೆಕ್ಟರ್ ವಂ.ಸ್ಟ್ಯಾನಿ ಬಿ.ಲೋಬೊ, ಸಹಾಯಕ ಧರ್ಮಗುರು ವಂ.ರೋಲ್ವಿನ್, ಪಿಲಾರ್ ಸಂಸ್ಥೆಯ ವಂ.ಡೆನಿಸ್‌ಡೇಸಾ, ಧರ್ಮಪ್ರಾಂತದ ಎಸ್ಟೇಟ್ ಮ್ಯಾನೇಜರ್ ವಂ.ಹೆನ್ರಿ ಮಸ್ಕರೇನ್ಹಸ್ ಉಪಸ್ಥಿತರಿದ್ದರು.
ಜಿಲ್ಲೆಯ ಕೆಲವೊಂದು ಚರ್ಚ್‌ಗಳಲ್ಲಿ ಯೇಸು ಕ್ರಿಸ್ತರು ಮರಣದಂಡನೆಗೆ ಗುರಿಯಾಗು ವಲ್ಲಿಂದ ಆರಂಭಿಸಿ ಶಿಲುಬೆ ಹೊತ್ತು ಕಲ್ವಾರಿ ಬೆಟ್ಟಕ್ಕೆ ಸಾಗಿ ಶಿಲುಬೆಗೆ ಏರಿ ಮರಣವನ್ನಪ್ಪುವ ಘಟನೆಗಳನ್ನು ಸ್ಮರಿಸುವ ಶಿಲುಬೆಯ ಹಾದಿಯನ್ನು ನಟನೆಯ ಮೂಲಕ ಚರ್ಚಿನ ಮೈದಾನದಲ್ಲಿ ನಡೆಸಿಕೊಟ್ಟರು.





