ಸಂಘಪರಿವಾರದಿಂದ ಸಂವಿಧಾನ ಬುಡಮೇಲು ಯತ್ನ: ಪ್ರೊ.ಫಣಿರಾಜ್

ಉಡುಪಿ, ಮಾ.25: ಪುತ್ತೂರು ದೇವಳದ ವಿವಾದವು ಒಬ್ಬ ವ್ಯಕ್ತಿಯ ವಿಚಾರವಲ್ಲ. ಸಂಘಪರಿವಾರ ದೇಶದ ಸಂವಿಧಾನಕ್ಕೆ ಹಾಕಿದ ಸವಾಲಾಗಿದೆ. ಸಂಘವಾದದ ಮೂಲಕ ಸಂವಿಧಾನವನ್ನು ಬುಡಮೇಲು ಮಾಡುವುದು ಮತ್ತು ಅಂಬೇಡ್ಕರ್‌ರ ಕನಸಾಗಿರುವ ಸ್ವಾತಂತ್ರ, ಸಮಾನತೆ, ಸಹಬಾಳ್ವೆಯನ್ನು ನಾಶ ಮಾಡುವ ಯತ್ನ ಇದಾಗಿದೆ. ಇದುವೇ ನಿಜವಾದ ದೇಶದ್ರೋಹ ಎಂದು ಹಿರಿಯ ಚಿಂತಕ ಪ್ರೊ.ಫಣಿರಾಜ್ ಆರೋಪಿಸಿದ್ದಾರೆ.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆಯ ಆಮಂತ್ರಣ ಪತ್ರಿಕೆಯಲ್ಲಿ ದ.ಕ. ಜಿಲ್ಲಾಧಿಕಾರಿಯವರ ಹೆಸರು ಮುದ್ರಿಸುವ ವಿಚಾರಕ್ಕೆ ಸಂಬಂಧಿಸಿ ಅಸಹಿಷ್ಣುತೆಯನ್ನು ಹೆಚ್ಚಿ ಸುತ್ತಿರುವ ಕೋಮುವಾದಿಗಳನ್ನು ಗಡಿಪಾರು ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ವತಿಯಿಂದ ಇಂದು ಉಡುಪಿಯ ಸರ್ವಿಸ್ ಬಸ್ ನಿಲ್ದಾಣದ ಕ್ಲಾಕ್ ಟವರ್ ಎದುರು ಹಮ್ಮಿಕೊಳ್ಳಲಾದ ಧರಣಿಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಮುಜರಾಯಿ ಇಲಾಖೆಗೆ ಹಿಂದೂ, ಅದು ಕೂಡ ಆಸ್ತಿಕ ಹಿಂದೂವೇ ಆಯುಕ್ತರಾಗಿರಬೇಕೆಂಬ ಕಾನೂನು ಸಂವಿಧಾನ ವಿರೋಧಿಯಾಗಿದೆ. ಪುತ್ತೂರು ದೇವಳದ ಆಮಂತ್ರಣ ವಿವಾದವು ಹಿಂದುತ್ವ ರಾಜಕೀಯ ಪಿತೂರಿಯಾಗಿದೆ. ಸಂಘಪರಿವಾರ ರಾಜಕೀಯ ಮಾಡುವುದಕ್ಕಾಗಿ ಈ ವಿಷಯವನ್ನು ಎಬ್ಬಿಸುತ್ತಿದೆ ಎಂದು ಅವರು ಟೀಕಿಸಿದರು.
ಹಿರಿಯ ಚಿಂತಕ ಜಿ.ರಾಜಶೇಖರ್ ಮಾತನಾಡಿದರು. ದಲಿತ ಚಿಂತಕ ಜಯನ್ ಮಲ್ಪೆ ಮಾತನಾಡಿ, ರಾಜಕೀಯ ಉದ್ದೇಶಕ್ಕಾಗಿ ಸಂಘಪರಿವಾರ ಕೋಮು ಧ್ವೇಷವನ್ನು ಬಿತ್ತುವ ಕಾರ್ಯವನ್ನು ನಡೆಸಿಕೊಂಡು ಬರುತ್ತಿದ್ದು, ಇದು ಅದರ ಮುಂದುವರಿದ ಭಾಗವಾಗಿದೆ. ಹಿಂದೂ ಪದಕ್ಕೆ ಕಳಂಕ ತರಲು ಸಂಘಪರಿವಾರಿಗಳೇ ಕಾರಣ ಎಂದು ಆರೋಪಿಸಿದರು.
ಸಂಘಪರಿವಾರದ ಮುಖಂಡರು ಈ ವಿಚಾರವನ್ನು ಮುಂದಿಟ್ಟು ಕೊಂಡು ಜನರನ್ನು ಉದ್ರೇಕಿಸುತ್ತ ನಾಡಿನ ನೆಮ್ಮದಿಯನ್ನು ಹಾಳು ಗೆಡವುತ್ತಿದ್ದಾರೆ. ಈ ಕುರಿತು ಪ್ರಚೋದನಕಾರಿ ಹೇಳಿಕೆ ನೀಡುವ ಮುಖಂಡರ ವಿರುದ್ಧ ರಾಜ್ಯ ಸರಕಾರ ಕೂಡಲೇ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದವರು ಆಗ್ರಹಿಸಿದರು.
ಧರಣಿಯಲ್ಲಿ ದಸಂಸ ಜಿಲ್ಲಾ ಸಂಚಾಲಕ ಶ್ಯಾಮ್‌ರಾಜ್ ಬಿರ್ತಿ, ಮುಖಂಡ ರಾದ ಮಂಜುನಾಥ ಗಿಳಿಯಾರು, ಸುಂದರ ಕಪ್ಪೆಟ್ಟು, ವಾಸು ನೇಜಾರು, ಧರ್ಮಗುರು ರೆ.ಫಾ.ವಿಲಿಯಂ ಮಾರ್ಟಿಸ್, ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಜಿಲ್ಲಾ ಕಾರ್ಯದರ್ಶಿ ದಿನಕರ ಬೆಂಗ್ರೆ, ಹುಸೈನ್ ಕೋಡಿಬೆಂಗ್ರೆ ಮೊದಲಾದವರು ಉಪಸ್ಥಿತರಿದ್ದರು.
ಪುತ್ತೂರು ದೇವಸ್ಥಾನ ವಿಷಯವನ್ನು ವಿವಾದ ಮಾಡುವ ಶಾಸಕ ಸುನೀಲ್ ಕುಮಾರ್ ಹಾಗೂ ಸಂಘಪರಿವಾರಕ್ಕೆ ಉಡುಪಿ ಮಠದಲ್ಲಿರುವ ಪಂಕ್ತಿಭೇದ, ಹಾಸನ ಜಿಲ್ಲೆಯ ದೇವಳವೊಂದರಲ್ಲಿ ದಲಿತರ ಪ್ರವೇಶ ನಿರಾಕರಣೆಗಳು ಕಾಣುತ್ತಿಲ್ಲ. ಪುತ್ತೂರು ವಿವಾದವು ಸಂಘಪರಿವಾರ ಅಂಬೇಡ್ಕರ್‌ರ ಸಂವಿಧಾನದ ವಿರುದ್ಧ ಮಾಡುತ್ತಿರುವ ಪಿತೂರಿಯ ಮುಂದುವರಿದ ಭಾಗವಾಗಿದೆ.
-ಪ್ರೊ.ಫಣಿರಾಜ್
ದೇಶದ ಸಂವಿಧಾನಕ್ಕಾಗಲಿ, ಕಾನೂನಿಗಾಗಲಿ ಅಥವಾ ಶಿಷ್ಟಾಚಾರ, ಸಭ್ಯತೆಗಳಿಗಾಗಲಿ ಸಂಘ ಪರಿವಾರದವರು ಗೌರವ ನೀಡುವುದು ಬಿಡಿ. ಕನಿಷ್ಠ ಮನುಷ್ಯ ಜೀವಕ್ಕಾದರೂ ಗೌರವ ನೀಡಲಿ. ಇವರಿಂದ ನಾವು ದೇಶಪ್ರೇಮ, ಧರ್ಮವನ್ನು ಕಲಿಯಬೇಕಾಗಿಲ್ಲ. ನಮ್ಮ ದೇಶ ಹಾಗೂ ಧರ್ಮಕ್ಕೆ ಕಳಂಕವಾಗಿರುವ ಇವರ ನೀತಿಗೆ ಧಿಕ್ಕಾರವಿರಲಿ.
-ಜಿ.ರಾಜಶೇಖರ್







