ಮಹಿಳೆಯ ವಿರುದ್ಧದ ಅಪರಾಧಗಳಲ್ಲಿ ತೀವ್ರ ಹೆಚ್ಚಳ: ನ್ಯಾಯಾಲಯ
ಹೊಸದಿಲ್ಲಿ, ಮಾ.25: ಮಹಿಳೆಯೋರ್ವಳ ಮಾನಕ್ಕೆ ಕುಂದನ್ನುಂಟು ಮಾಡಿದ್ದಕ್ಕಾಗಿ 20ರ ಹರೆಯದ ಯುವಕನೋರ್ವನಿಗೆ ಒಂದು ವರ್ಷದ ಕಠಿಣ ಶಿಕ್ಷೆಯನ್ನು ವಿಧಿಸಿರುವ ದಿಲ್ಲಿಯ ನ್ಯಾಯಾಲಯವೊಂದು, ಮಹಿಳೆಯರ ಮೇಲಿನ ಅಪರಾಧಗಳು ದಿನೇದಿನೇ ಹೆಚ್ಚುತ್ತಿದ್ದು, ಅಪರಾಧಿಗಳಿಗೆ ಭೀತಿಯೇ ಇಲ್ಲವಾಗಿದೆ ಎಂದು ಹೇಳಿದೆ.
ಮಧ್ಯ ದಿಲ್ಲಿಯ ನಿವಾಸಿ ಅಭಿಮನ್ಯುವನ್ನು ಆರೋಪಮುಕ್ತಗೊಳಿಸಿದ್ದ ಕೆಳ ನ್ಯಾಯಾಲಯದ ಆದೇಶವನ್ನು ತಳ್ಳಿಹಾಕಿದ ವಿಶೇಷ ನ್ಯಾಯಾಧೀಶ ಸಂಜೀವ್ ಅಗರವಾಲ್ ಅವರು ಆತನನ್ನು ಒಂದು ವರ್ಷದ ಅವಧಿಗೆ ಜೈಲಿಗೆ ಕಳುಹಿಸಿದರು.
ನರ್ಸಿಂಗ್ ಆಯಾ ಆಗಿರುವ ಮಹಿಳೆ 2013,ಡಿ.9ರಂದು ದೂರು ದಾಖಲಿಸಿ, ಅಭಿಮನ್ಯು ತನ್ನನ್ನು ಪ್ರತಿದಿನ ಹಿಂಬಾಲಿಸುತ್ತಿದ್ದು,ಅದನ್ನು ತಾನು ಪ್ರಶ್ನಿಸಿದಾಗ ತನ್ನನ್ನು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿ ಮಾನಕ್ಕೆ ಕುಂದನ್ನುಂಟು ಮಾಡಿದ್ದಾನೆ. ಅಲ್ಲದೆ ರಸ್ತೆಯಲ್ಲಿ ಎದುರಾದಾಗಲೆಲ್ಲ ತನ್ನನ್ನು ನಿಂದಿಸುತ್ತಿದ್ದಾನೆ ಎಂದು ಆರೋಪಿಸಿದ್ದಳು.
ತಾನು ಅಮಾಯಕನಾಗಿದ್ದು ತನ್ನನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಅಭಿಮನ್ಯು ಹೇಳಿಕೊಂಡಿದ್ದ.
ಘಟನೆಯು ನಡೆದಾಗ ಆರೋಪಿಯು ಕೇವಲ 20 ವರ್ಷದವನಾಗಿದ್ದ ಮತ್ತು ತನ್ನ ಕುಟುಂಬದಲ್ಲಿ ಏಕೈಕ ದುಡಿಯುವ ವ್ಯಕ್ತಿಯಾಗಿದ್ದಾನೆ ಎನ್ನುವುದನ್ನು ಗಮನಕ್ಕೆ ತೆಗೆದುಕೊಂಡ ನ್ಯಾಯಾಲಯವು,ಅಪರಾಧಿಗೆ ಒಂದು ವರ್ಷದ ಕಠಿಣ ಶಿಕ್ಷೆ ವಿಧಿಸಿದರೆ ನ್ಯಾಯದ ಹಿತಾಸಕ್ತಿಯು ಈಡೇರುತ್ತದೆ ಎಂದು ಹೇಳಿತಲ್ಲದೆ, 1,500 ರೂ. ದಂಡವನ್ನೂ ವಿಧಿಸಿತು.







