ಬಲೆಯಂತಹ ಗೂಡುಗಳನ್ನು ರಚಿಸುವ ಗೊದ್ದದ ಹೊಸ ಪ್ರಭೇದ ಪತ್ತೆ
ಕೋಲ್ಕತಾ,ಮಾ.25: ಜೀವವೈವಿಧ್ಯ ಸಮೃದ್ಧ ಪಶ್ಚಿಮ ಘಟ್ಟಗಳಲ್ಲಿ ಅಡ್ಡಸಾಲಿನಲ್ಲಿ ಕಂಡಿಗಳನ್ನು ಹೊಂದಿರುವ ಬಲೆಯಂತಹ ಗೂಡುಗಳನ್ನು ನಿರ್ಮಿಸುವ ಗೊದ್ದದ ಹೊಸ ಪ್ರಭೇದವನ್ನು ಪ್ರಾಣಿಶಾಸ್ತ್ರಜ್ಞರ ತಂಡವೊಂದು ಪತ್ತೆ ಹಚ್ಚಿದೆ.
ಅನೊಕೆಟಸ್ ಡೇಡಲಸ್ ಎಂದು ಹೆಸರಿಸಲಾಗಿರುವ ಈ ನೂತನ ಪ್ರಭೇದವು ಬೆಂಗಳೂರಿನ ಅಶೋಕ ಟ್ರಸ್ಟ್ ಆಫ್ ಇಕಾಲಜಿ ಆ್ಯಂಡ್ ಎನ್ವಿರಾನ್ಮೆಂಟ್‌ನ ತಂಡದ ಕಣ್ಣಿಗೆ ಬಿದ್ದಿದ್ದು,ಕರೆಂಟ್ ಸೈನ್ಸ್ ಜರ್ನಲ್‌ನ ಇತ್ತೀಚಿನ ಸಂಚಿಕೆಯಲ್ಲಿ ಸಂಶೋಧನಾ ಲೇಖನವು ಪ್ರಕಟಗೊಂಡಿದೆ.
ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಹೆಗ್ಗರಣಿ ಗ್ರಾಮದ ಸಮುದಾಯ ಅರಣ್ಯಕ್ಕೆ ಇತ್ತೀಚಿಗೆ ಭೇಟಿ ನೀಡಿದ್ದ ತಂಡವು ಮರವೊಂದರಲ್ಲಿ ವಿಶಿಷ್ಟ ಮಣ್ಣಿನ ರಚನೆಯನ್ನು ಗಮನಿಸಿತ್ತು. ಹೊರನೋಟಕ್ಕೆ ಬಲೆಯಂತೆ ಕಂಡು ಬರುತ್ತಿದ್ದ ಅದನ್ನು ಬೇರ್ಪಡಿಸಿ ಅದರ ಒಳರಚನೆಯನ್ನು ಪರಿಶೀಲಿಸಿದಾಗ ಅಡ್ಡಸಾಲುಗಳಲ್ಲಿದ್ದ ಕಂಡಿಗಳಲ್ಲಿ ಕೆಲವು ಗೊದ್ದಗಳು ಓಡಾಡುತ್ತಿದ್ದವು. ಈ ಗೊದ್ದಗಳು ಇಕ್ಕಳದಂತಹ ದವಡೆಯನ್ನು ಹೊಂದಿದ್ದು,ತಮ್ಮ ಬೇಟೆಯನ್ನು ಬಾಯಿಗೆ ಹಾಕಿಕೊಂಡು ಎಷ್ಟು ಬಲವಾಗಿ ದವಡೆಯನ್ನು ಮುಚ್ಚುತ್ತವೆಂದರೆ ಬೇಟೆ ಹಲವಾರು ತುಂಡುಗಳಾಗಿ ಬಿಡುತ್ತದೆ ಎಂದು ತಂಡದ ಸದಸ್ಯ ಪ್ರಿಯದರ್ಶನ ಧರ್ಮರಾಜನ್ ತಿಳಿಸಿದರು. ನೂತನ ಪ್ರಭೇದವು 125 ವರ್ಷಗಳ ಹಿಂದೆ ಶ್ರೀಲಂಕಾದಲ್ಲಿ ಪತ್ತೆಯಾಗಿದ್ದ ‘ಅನೊಕೆಟಸ್ ನೀತ್‌ನೆರಿ’ ಪ್ರಭೇದವನ್ನು ಅತ್ಯಂತ ನಿಕಟವಾಗಿ ಹೋಲುತ್ತದೆ. ಅಲ್ಲಿಂದೀಚೆಗೆ ವಿಶ್ವದ ಯಾವುದೇ ಭಾಗದಲ್ಲಿ ಇಂತಹ ಪ್ರಭೇದ ಪತ್ತೆಯಾಗಿದ್ದು ವರದಿಯಾಗಿಲ್ಲ ಎಂದು ಅವರು ಹೇಳಿದರು.





