ಉತ್ತರಾಖಂಡ ಬಂಡಾಯ ಕಾಂಗ್ರೆಸ್ ಶಾಸಕರ ಅರ್ಜಿ ವಜಾ

ಮೊಹಾಲಿ, ಮಾ. 26: ಉತ್ತರಾಖಂಡದ ಹರೀಶ್ ರಾವತ್ ಸರಕಾರಕ್ಕೆ ಇಂದು ಬಹುದೊಡ್ಡ ನೆಮ್ಮದಿ ದೊರಕಿದೆ. ನೈನಿತಾಲ್‌ನ ಉಚ್ಚನ್ಯಾಯಾಲಯವು ಸರಕಾರದ ವಿರುದ್ಧ ಬಂಡಾಯವೆದ್ದ ಕಾಂಗ್ರೆಸ್‌ನ ಒಂಬತ್ತು ಶಾಸಕರುಗಳಿಗೆ ವಿಧಾನಸಭಾಧ್ಯಕ್ಷರು ಸದನದ ಸದಸ್ಯತ್ವವನ್ನು ಯಾಕೆ ಅಯೋಗ್ಯಗೊಳಿಸಬಾರದೆಂದು ನೀಡಿದ್ದ ಶೋಕಾಸ್ ನೋಟಿಸನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.
ಇದರಿಂದಾಗಿ ಹರೀಶ್ ರಾವತ್ ಸರಕಾರ ಒಂದು ಗಂಡಾಂತರದಿಂದ ಪಾರಾದಂತಾಗಿದೆ. ನ್ಯಾಯಮೂರ್ತಿ ಸುಧಾಂಶು ಧೂಲಿಯಾರ ಅಧ್ಯಕ್ಷರಿದ್ದ ಉಚ್ಚನ್ಯಾಯಾಲಯದ ಏಕಸದಸ್ಯ ಪೀಠವು ಬಂಡಾಯ ಕಾಂಗ್ರೆಸ್ ಶಾಸಕರು ಸಲ್ಲಿಸಿದ ಅರ್ಜಿಯ ಕುರಿತು ಆಲಿಕೆ ನಡೆಸಿದ ನಂತರ ವಜಾಗೊಳಿಸಿದರು.
ಕೋರ್ಟ್ ಆಲಿಕೆ ನಂತರ ಕಾಂಗ್ರೆಸ್ ಸರಕಾರದ ವಕೀಲ ಕಪಿಲ್ ಸಿಬಲ್‌ರು ಪತ್ರಕರ್ತರೊಂದಿಗೆ ಮಾತಾಡಿ" ನ್ಯಾಯಾಲಯ ಅರ್ಜಿ ತಿರಸ್ಕರಿಸಲು ನೀಡಿರುವ ಕಾರಣವನ್ನು ತೀರ್ಪಿನ ಪ್ರತಿಯನ್ನು ಓದಿದ ನಂತರವಷ್ಟೇ ಪ್ರತಿಕ್ರಿಯಿಸಲು ಸಾಧ್ಯ" ಎಂದು ಹೇಳಿದರು.
ಸರಕಾರದ ಪರವಾಗಿ ನೀವು ಯಾವ ರೀತಿಯ ವಾದವನ್ನು ಮಂಡಿಸಿದಿರಿ ಎಂದು ಪ್ರಶ್ನಿಸಿದಾಗ ಕಪಿಲ್ ಸಿಬಲ್‌ರು"ಒಂದು ವೇಳೆ ವಿಧಾನಸಭಾಧ್ಯಕ್ಷರು ಸದಸ್ಯರಿಗೆ ಯಾವುದಾದರೂ ನೋಟಿಸ್ ನೀಡಿದ್ದರೆ ಅದರ ಬಗ್ಗೆ ಸ್ವಯಂ ಅವರೇ ನಿರ್ಣಯಿಸಬಹುದಾಗಿದೆ.
ಸಂವಿಧಾನದ ಅನುಚ್ಛೇದ 226ರ ಪ್ರಕಾರ ಇದನ್ನು ಅವರು ಮಾತ್ರವೇ ನಿರ್ಧರಿಸಬೇಕಾಗುತ್ತದೆ. ವಿಧಾನಸಭಾಧ್ಯಕ್ಷರು ನಿರ್ಣಯ ಮಾಡದಿರುವವರೆಗೆ ಉಚ್ಚನ್ಯಾಯಾಲಯದ ಅಧಿಕಾರ ವ್ಯಾಪ್ತಿಗೆ ಈ ಪ್ರಕರಣ ಒಳಪಡುವುದಿಲ್ಲವೆಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಮಂಡಿಸಿ ವಾದಿಸಿದ್ದಾಗಿ ಕಪಿಲ್ ಸಿಬಲ್ ತಿಳಿಸಿದ್ದಾರೆ.







