ಕೊನೆಗೂ ಸಮಸ್ಯೆ ನಿವಾರಣೆಗೆ ಮುಂದಾದ ಅಧಿಕಾರಿಗಳು
ಬಿ.ಸಿ.ರೋಡ್: ಟ್ರಾಫಿಕ್ ಕಿರಿಕಿರಿ

ಬಂಟ್ವಾಳ, ಮಾ. 26: ಬಿ.ಸಿ.ರೋಡ್ ಸರ್ವೀಸ್ ರಸ್ತೆಯಲ್ಲಿ ನಿರಂತರವಾಗಿ ಉಂಟಾಗುತ್ತಿರುವ ಟ್ರಾಫಿಕ್ ಜಾಮ್ ಸಮಸ್ಯೆ ನಿವಾರಣೆಗೆ ಕೊನೆಗೂ ಅಧಿಕಾರಿಗಳು ಮುಂದಾಗಿದ್ದಾರೆ.
ಬಿ.ಸಿ.ರೋಡ್ ಸರ್ವೀಸ್ ರಸ್ತೆಯಲ್ಲಿ ದಿನನಿತ್ಯ ಉಂಟಾಗುತ್ತಿರುವ ಟ್ರಾಫಿಕ್ ಕಿರಿಕಿರಿಯಿಂದಾಗಿ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.
ಇದನ್ನು ಮನಗಂಡ ಬಂಟ್ವಾಳ ಟ್ರಾಫಿಕ್ ಎಸ್ಸೈ ಚಂದ್ರಶೇಖರಯ್ಯ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಮುಖ್ಯಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದ್ದರು.
ಈ ನಿಟ್ಟಿನಲ್ಲಿ ಶನಿವಾರ ಬೆಳಗ್ಗೆ ಸ್ಥಳಕ್ಕೆ ಭೇಟಿ ನೀಡಿದ ಎಸ್ಸೈ ಚಂದ್ರಶೇಖರಯ್ಯ, ಪುರಸಭೆ ಅಧ್ಯಕ್ಷ ರಾಮಾಕೃಷ್ಣ ಆಳ್ವ, ಉಪಾಧ್ಯಕ್ಷ ಮುಹಮ್ಮದ್, ಮುಖ್ಯಧಿಕಾರಿ ಸುಧಾಕರ್ ಭಟ್ ಪರಿಶೀಲನೆ ನಡೆಸಿದರು.
ರೋಟರಿ ಹಾಗೂ ಸ್ಥಳೀಯ ಉದ್ಯಮಿಗಳ ನೆರವಿನೊಂದಿಗೆ ಬೇಸಿಗೆ ಮತ್ತು ಮಳೆಗಾಲದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ ಹಾಗೆ ಸರ್ವೀಸ್ ರಸ್ತೆಯಲ್ಲಿ ಹಳೆ ತಾಲೂಕು ಕಚೇರಿಗೆ ತಾಗಿಕೊಂಡು ತಾತ್ಕಾಲಿಕ ಬಸ್ ಶೆಲ್ಟರ್ ನಿರ್ಮಾಣ, ಸುಮಾರು 20 ಪೈಪ್ ಗಳನ್ನು ಅಳವಡಿಸಿಕೊಂಡು ಚರಂಡಿ ನಿರ್ಮಾಣ ಹಾಗೂ ಸರ್ವೀಸ್ ರಸ್ತೆ ಅಗಲೀಕರಣ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು.
ಅಲ್ಲದೆ, ಸರ್ವೀಸ್ ರಸ್ತೆ ಬದಿ ಇರುವ ಅನಧಿಕೃತ ಅಂಗಡಿಗಳ ತೆರವುಗೊಳಿಸುವುದು, ಬೇಕಾಬಿಟ್ಟಿ ಪಾರ್ಕಿಂಗ್ ಗೆ ಮಾಡುವುದಕ್ಕೆ ಕಡಿವಾಣ ಹಾಕುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಇದೇ ಸಂದರ್ಭದಲ್ಲಿ ಅಧಿಕಾರಿಗಳು ಮಾಹಿತಿ ನೀಡಿದರು.







