ಈಗ ಶಿಕ್ಷಣ ಕ್ಷೇತ್ರದಿಂದಲೂ ವಲಸಿಗರಿಗೆ ಗೇಟ್ ಪಾಸ್ ?
ಸೌದಿ ಸಂಕಟ

ರಿಯಾದ್ , ಮಾ. 26: ಅಧ್ಯಾಪಕ , ಪ್ರಾಧ್ಯಾಪಕ ಹುದ್ದೆಗಳಿಗೆ ಡಾಕ್ಟೋರೇಟ್ ಮಾಡಿರುವ ಸೌದಿ ಪ್ರಜೆಗಳಿಗೆ ಆದ್ಯತೆ ನೀಡಬೇಕು ಎಂದು ಶಿಕ್ಷಣ ಸಚಿವ ಅಹ್ಮದ್ ಅಲ್ ಇಸ್ಸ ಸೌದಿಯ ವಿಶ್ವ ವಿದ್ಯಾಲಯಗಳಿಗೆ ನಿರ್ದೇಶನ ನೀಡಿದ್ದಾರೆ.
ಇದರೊಂದಿಗೆ ಶಿಕ್ಷಣ ಕ್ಷೇತ್ರದಲ್ಲೂ ಪ್ರತಿಷ್ಠಿತ ಹಾಗು ದೊಡ್ಡ ಸಂಬಳ ಸಿಗುವ ಶಿಕ್ಷಕ ವೃತ್ತಿಯಲ್ಲಿ ವಲಸಿಗರನ್ನು ದೂರ ಇಡುವ ಪ್ರಕ್ರಿಯೆಗೆ ಚಾಲನೆ ನೀಡಿದಂತಾಗಿದೆ.
ಸ್ಥಳೀಯ ವಿವಿ ಅಧಿಕಾರಿಗಳು ತಮ್ಮ ಬಗ್ಗೆ ಪಕ್ಷಪಾತದ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಸೌದಿ ಪ್ರಜೆಗಳು ದೂರಿದ ಮೇಲೆ ಈ ನಿರ್ದೇಶನ ನೀಡಲಾಗಿದೆ. " ಅವರ ಅರ್ಜಿಗಳಿಗೆ ಸೂಕ್ತ ಗಮನ ನೀಡಬೇಕು, ಅಗತ್ಯ ಹುದ್ದೆ ಹಾಗು ತಜ್ಞರ ಅಗತ್ಯವಿರುವಾಗ ಅದಕ್ಕೆ ಸೂಕ್ತ ಸೌದಿಗಳ ಅರ್ಜಿಯನ್ನು ಸಮಗ್ರವಾಗಿ ಪರಿಶೀಲಿಸಬೇಕು " ಎಂದು ಇಸ್ಸ ಹೇಳಿದ್ದಾರೆ.
ವಿವಿಯ ವಿಶೇಷ ಸಮಿತಿ ಈ ಅರ್ಜಿಗಳನ್ನು ಪರಿಶೀಲಿಸಬೇಕೆ ವಿನಃ, ಆಯಾ ಇಲಾಖೆಗಳ ಡೀನ್ ಹಾಗು ಮುಖ್ಯಸ್ಥರಲ್ಲ ಎಂದೂ ಅವರು ಹೇಳಿದ್ದಾರೆ.
ವಿವಿಗಳು ವಲಸಿಗರಿಗೆ ಆದ್ಯತೆ ನೀಡುವುದು ಹಾಗು ಅರ್ಜಿ ಪ್ರಕ್ರಿಯೆ ತೀರಾ ಸಂಕೀರ್ಣವಾಗಿರುವುದು ಸೌದಿ ಪ್ರಜೆಗಳ ಅಸಮಾಧಾನಕ್ಕೆ ಕಾರಣ. ಸೌದಿ ವಿವಿಗಳಲ್ಲಿ ಅಧ್ಯಾಪಕ ಹುದ್ದೆ ಅತ್ಯಂತ ಪ್ರತಿಷ್ಠಿತ ಹಾಗು ಅತ್ಯುತ್ತಮ ವೇತನ , ಸೌಲಭ್ಯ ಸಿಗುವ ಹುದ್ದೆ. ಆದರೆ ವಲಸಿಗರಿಂದ ಈ ಹುದ್ದೆಗಳಿಗೆ ಸೌದಿ ಪ್ರಜೆಗಳು ಭಾರೀ ಸ್ಪರ್ಧೆ ಎದುರಿಸುತ್ತಿದ್ದಾರೆ.







