ವಿದ್ಯಾರ್ಥಿಗಳು ಸಮಾಜ ಕಟ್ಟುವ ಯೋಗ್ಯರಾಗಿ ರೂಪುಗೊಳ್ಳಬೇಕು-ಶಾಸಕಿ ಶಕುಂತಳಾ ಶೆಟ್ಟಿ

ಪುತ್ತೂರು: ವಿದ್ಯಾರ್ಥಿಗಳು ಶಿಕ್ಷಣವನ್ನು ಅಂಕದ ದೃಷ್ಟಿಯಿಂದ ಮಾತ್ರ ಪರಿಗಣಿಸದೆ ಸಮಾಜ ಕಟ್ಟುವ ಯೋಗ್ಯರಾಗಿ ವಿದ್ಯಾರ್ಥಿ ಸಮುದಾಯ ರೂಪುಗೊಳ್ಳಬೇಕು ಎಂದು ಪುತ್ತೂರು ಶಾಸಕಿ, ರಾಜ್ಯ ಸಂಸದೀಯ ಕಾರ್ಯದರ್ಶಿ ಶಕುಂತಳಾ ಟಿ. ಶೆಟ್ಟಿ ಹೇಳಿದರು. ಅವರು ನಗರದ ಪುರಭವನದಲ್ಲಿ ಶನಿವಾರ ನಡೆದ ಪುತ್ತೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಯುವ ಸಮುದಾಯ ಸಮಾಜದ ಸಮಸ್ಯೆ, ಸಂಕಷ್ಟಗಳಿಗೆ ಸ್ಪಂದಿಸುವ ಜತೆಗೆ ಸಮಾಜದ ಪ್ರಗತಿಗೆ ಪೂರಕವಾಗಿ ಬೆಳೆಯಬೇಕು. ಯಾವುದೇ ಸಮಸ್ಯೆಗಳನ್ನು ಉಧ್ವೇಗಕ್ಕೆ ಒಳಗಾಗದೆ ಶಾಂತ ರೀತಿಯಿಂದ ಎದುರಿಸಿ ಗೆಲ್ಲುವ ಸಾಮರ್ಥ್ಯವನ್ನು ಪಡೆದುಕೊಂಡಾಗ ಸಮಾಜದ ಎದುರಿನಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸಮಾಜದ ಪ್ರಗತಿಗೆ ಪೂರಕವಾಗುವಂತೆ ಯುಕ್ತವಾಗಿ ಹಾಗೂ ಶಕ್ತಿಯಾಗಿ ಯುವ ಸಮುದಾಯ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಪುತ್ತೂರಿನ ಜಿಡೆಕಲ್ಲು ಎಂಬಲ್ಲಿ ಕಾರ್ಯನಿರ್ವಹಿಸುತ್ತಿರುವ ಪುತ್ತೂರು ಸ. ಪ್ರ. ಕಾಲೇಜಿಗೆ ಇತರ ಜಿಲ್ಲೆಗಳಿಂದ ಹೆಣ್ಣು ಮಕ್ಕಳು ಹೆಚ್ಚಾಗಿ ಬರುತ್ತಾರೆ. ಈ ನಿಟ್ಟಿನಲ್ಲಿ ಆ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪೂರಕವಾಗುವಂತೆ 100 ಮಂದಿ ಉಳಿದುಕೊಳ್ಳಬಹುದಾದ ಹಾಸ್ಟೆಲ್ ವ್ಯವಸ್ಥೆಯನ್ನು ಮಂಜೂರು ಮಾಡಿಸಿದ್ದೇನೆ ಎಂದು ಶಾಸಕರು ಈ ಸಂದರ್ಭದಲ್ಲಿ ತಿಳಿಸಿದರು.
ಬೆಳ್ತಂಗಡಿ ಸ. ಪ್ರ. ದ. ಕಾಲೇಜಿನ ರಾಜ್ಯಶಾಸ್ತ್ರ ವಿಭಾಗ ಪ್ರಾಧ್ಯಾಪಕ ಪ್ರೊ. ಆ್ಯಂಟನಿ ಟಿ.ಪಿ. ಮಾತನಾಡಿ ಮನುಷ್ಯತ್ವಕ್ಕಿಂತ ದೊಡ್ಡ ಮಾನವೀಯತೆ ಇಲ್ಲ. ಶಿಕ್ಷಣದ ಮೂಲಕ ಮನುಷ್ಯತ್ವವನ್ನು ತಿಳಿದುಕೊಳ್ಳಬೇಕಾದ ಅನಿವಾರ್ಯತೆ ಇಂದು ಅಗತ್ಯವಾಗಿದೆ. ಪ್ರಾಕೃತಿಕ ಸಂಪತ್ತುಗಳನ್ನು ಉಳಿಸಿಕೊಂಡು ನೈಜ ಪ್ರಾಕೃತಿಕ ಅನುಭವವನ್ನು ನಾವು ಪಡೆದುಕೊಳ್ಳಬೇಕು. ಹಿಂಸೆ, ವೈರಾಗ್ಯ ಮನಸ್ಸಿನಲ್ಲಿ ಹೇಗೆ ಮೂಡುತ್ತದೆಯೋ ಹಾಗೆಯೇ ಸ್ವಚ್ಛತೆಯ ಜಾಗೃತಿಯೂ ನಮ್ಮಲ್ಲಿ ಯಾಕೆ ಹುಟ್ಟುವುದಿಲ್ಲ ಎಂಬುದನ್ನು ಅರಿತುಕೊಳ್ಳಬೇಕು ಎಂದರು.
ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಪುಟ್ಟಣ್ಣ ಗೌಡ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ದೈ. ಶಿ. ನಿರ್ದೇಶಕ ಸೇಸಪ್ಪ, ಸಾಂಸ್ಕೃತಿಕ ಸಂಘದ ಅಧ್ಯಕ್ಷ ಸಂತೋಷ್ ಬಿ., ಕಾರ್ಯದರ್ಶಿ ಜಯಂತ್, ಸಹ ಕಾರ್ಯದರ್ಶಿ ನಿಶ್ಮಿತಾ ರೈ, ಸಮಿತ್ ಪಿ., ಕ್ರೀಡಾ ಕಾರ್ಯದರ್ಶಿ ದೀಪಕ್, ಪ್ರಜ್ವಲ್ ಡಿಸೋಜ, ಕೃತಿಕಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾಲೇಜಿನ ಪ್ರಭಾರ ಪ್ರಾಂಶುಪಾಲೆ ನಳಿನಾಕ್ಷಿ ಎ.ಎಸ್. ವರದಿ ವಾಚಿಸಿದರು. ಸಾಂಸ್ಕೃತಿಕ ಸಂಘದ ಸಂಚಾಲಕಿ ಸುಜಾತ ಪಿ.ಎಸ್. ಸ್ವಾಗತಿಸಿ, ಪವನ ವಂದಿಸಿದರು. ವಿದ್ಯಾರ್ಥಿ ವಜ್ರೇಶ್ ಕಾರ್ಯಕ್ರಮ ನಿರ್ವಹಿಸಿದರು.







