ಬೆಳ್ತಂಗಡಿ: ವಿವಿಧ ಯೋಜನೆಯಡಿ ಸಾಲ ಸೌಲಭ್ಯ ಮಂಜೂರಾದ ಚೆಕ್‌ಗಳ ವಿತರಣೆ

ಬೆಳ್ತಂಗಡಿ: ರಾಜ್ಯದ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದಿಂದ 2015-16ನೇ ಸಾಲಿನಲ್ಲಿ ತಾಲೂಕಿನ 396 ಮಂದಿ ಫಲಾನುಭವಿಗಳಿಗೆ 94.25 ಲಕ್ಷ ರೂ.ಗಳ ಸವಲತ್ತುಗಳನ್ನು ನೀಡಲಾಗಿದೆ ಎಂದು ಶಾಸಕ ಕೆ. ವಸಂತ ಬಂಗೇರ ತಿಳಿಸಿದರು. ಅವರು ಶನಿವಾರ ಬೆಳ್ತಂಗಡಿ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಕಲ್ಯಾಣ ಮಂಟಪದಲ್ಲಿ ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ ವಿವಿಧ ಯೋಜನೆಯಡಿ ಸಾಲ ಸೌಲಭ್ಯ ಮಂಜೂರಾದ ಚೆಕ್‌ಗಳನ್ನು ವಿತರಿಸಿ ಮಾತನಾಡಿದರು.
ತಾಲೂಕಿನಲ್ಲಿ 100ಕ್ಕೂ ಮಿಕ್ಕಿ ಗಂಗಾಕಲ್ಯಾಣ ಯೋಜನೆಗಳು ಅನುಷ್ಠಾನಗೊಂಡಿವೆ. ಸರಕಾರದ ಈ ಯೋಜನೆಯನ್ನು ದುರಪಯೋಗಪಡಿಸಿಕೊಳ್ಳುವುದು ಸರಿಯಲ್ಲ. ಏಜೆಂಟ್‌ಗಳ ಹಾವಳಿ ಅಧಿಕವಾಗಿದ್ದು ಯಾರೂ ಅವರಿಗೆ ಹಣ ನೀಡದೆ ಯೋಜನೆಗಳ ಸದುಪಯೋಗವನ್ನು ಪಡೆದುಕೊಳ್ಳಬೇಕು. ಸರಕಾರ ಅಲ್ಪಸಂಖ್ಯಾತರಿಗೆ ಹಲವಾರು ಯೋಜನೆಗಳನ್ನು ತಂದಿದೆ. ಸರಕಾರ ಸಾಲ ಮತ್ತು ಸಬ್ಸಿಡಿ ನೀಡುತ್ತದೆ. ಅದರ ಮರುಪಾವತಿಯೂ ಸರಿಯಾಗಿರುವುದು ಒಳ್ಳೆಯದರು. ಬಡವರನ್ನು ಮೇಲೆತ್ತುವ ಕೆಲಸವನ್ನು ಸರಕಾರ ನಿರಂತರ ಮಾಡುತ್ತಿದೆ ಎಂದರು.
ಮುಖ್ಯ ಅತಿಥಿಗಳಾಗಿ ಪಟ್ಟಣ ಪಂ. ಅಧ್ಯಕ್ಷ ಮುಗುಳಿ ನಾರಾಯಣ ರಾವ್ ಅವರು ಎಲ್ಲಾ ನಿಗಮಗಳಿಂದ ಸವಲತ್ತುಗಳು ಫಲಾನುಭವಿಗಳಿಗೆ ಸಿಗುತ್ತಿದೆ. ಪ್ರತೀ ಸಮಾಜದ ಜನರು ಇದರ ಉಪಯೋಗಪಡೆದುಕೊಳ್ಳಬೇಕು. ನಿಗಮಗಳಲ್ಲಿ ಸಿಗುವ ಸೌಲಭ್ಯಗಳ ಪ್ರಚಾರ ಕಡಿಮೆಯಾಗುತ್ತಿದ್ದು ಫಲಾನುಭವಿಗಳು ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ಇದರ ಬಗ್ಗೆ ಜನರಿಗೆ ಮಾಹಿತಿ ನೀಡುವ ಕೆಲಸ ಆಗಬೇಕು ಎಂದರು.
ಕರ್ನಾಟಕ ರಾಜ್ಯ ಜೈನ ಸ್ವಯಂಸೇವಕ ಸ್ವಸಹಾಯ ಸಂಘದ ರಾಜ್ಯ ಸಂಚಾಲಕ ನೇಮಿರಾಜ ಆರಿಗ ಅವರು ಸರಕಾರದ ಯೋಜನೆ ಶಾಸಕರ ಅಧ್ಯಕ್ಷತೆಯಲ್ಲಿ ಅಲ್ಪಸಂಖ್ಯಾತ ನಿಗಮದ ಸವಲತ್ತುಗಳನ್ನು ನೀಡಲಾಗುತ್ತಿದೆ. ಜೈನ, ಕ್ರೈಸ್ತ, ಮುಸಲ್ಮಾನ ಸಮಾಜದ ಫಲಾನುಭವಿಗಳು ನೀಡಿದ ಅರ್ಜಿಗಳಿಗೆ ಬೆಳ್ತಂಗಡಿ ಶಾಸಕರು ಸ್ಪಂದನೆಗಳನ್ನು ನೀಡಿ ಜನರಿಗೆ ತಲುಪುವಂತೆ ಮಾಡಿದ್ದಾರೆ ಎಂದರು. ಪಟ್ಟಣ ಪಂ. ಸದಸ್ಯ ಸಂತೋಷ್ ಕುಮಾರ್ ಜೈನ್ ಉಪಸ್ಥಿತರಿದ್ದರು.ಅಲ್ಪಸಂಖ್ಯಾತ ನಿಗಮದ ಜಿಲ್ಲಾ ವ್ಯವಸ್ಥಾಪಕ ಎಸ್.ಡಿ.ಸೋಮಪ್ಪ ಸ್ವಾಗತಿಸಿ ಪ್ರಸ್ತಾವಿಸಿದರು. ಕರ್ನಾಟಕ ರಾಜ್ಯ ಜೈನ ಸ್ವಯಂಸೇವಕ ಸ್ವಸಹಾಯ ಸಂಘದ ಜಿಲ್ಲ ಸಂಚಾಲಕ ವೃಷಭ ಆರಿಗ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.





