ಪುತ್ತೂರು : ಗ್ರಾಮಸ್ಥರಿಂದ ರಸ್ತೆ ತಡೆ ಪ್ರತಿಭಟನೆ -ಉಗ್ರ ಹೋರಾಟದ ಎಚ್ಚರಿಕೆ
ಪಂಚೋಡಿಯಲ್ಲಿ ವೈನ್ಶಾಪ್ ತೆರೆಯುವುದಕ್ಕೆ ತೀವ್ರ ವಿರೋಧ

ಪ್ರತಿಭಟನಾಕಾರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸುತ್ತಿರುವುದು.
ಪುತ್ತೂರು : ಪುತ್ತೂರು ತಾಲ್ಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಪಂಚೋಡಿ (ಓಣಿಯಡ್ಕ) ಎಂಬಲ್ಲಿ ಪರಿಶಿಷ್ಟ ಜಾತಿಯ ಕಾಲೋನಿಯಲ್ಲಿ ಸರ್ಕಾರಿ ಪ್ರೌಢ ಶಾಲೆ, ಮಸೀದಿ, ಸಾರ್ವಜನಿಕ ಬಸ್ಸು ತಂಗುದಾಣವಿರುವ ಪ್ರದೇಶದಲ್ಲಿ ಪಂಚಾಯಿತಿ ಹಾಗೂ ವಿವಿಧ ಸಂಘ ಸಂಸ್ಥೆಗಳ ವಿರೋಧದ ನಡುವೆಯೇ ವೈನ್ಶಾಪ್ ತೆರೆಯಲು ಮುಂದಾಗಿರುವುದನ್ನು ವಿರೋಧಿಸಿ ಗ್ರಾಮಸ್ಥರು ಶುಕ್ರವಾರ ಪಂಚೋಡಿಯಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು
ಪಂಜೋಡಿಯಲ್ಲಿ ವೈನ್ಶಾಪ್ ತೆರೆಯುವುದಕ್ಕೆ ಓಣಿಯಡ್ಕ ಪರಿಶಿಷ್ಟ ಜಾತಿ ಕಾಲೋನಿ ಮತ್ತು ಮಡ್ಯಲಮಜಲು ಪರಿಶಿಷ್ಟ ಜಾತಿಯ ಕಾಲೋನಿ, ಸರ್ಕಾರಿ ಪ್ರೌಢ ಶಾಲೆ, ಮಸೀದಿ ವತಿಯಿಂದ ಸಂಬಂಧಪಟ್ಟವರಿಗೆ ಆಕ್ಷೇಪಣೆ ಸಲ್ಲಿಸಲಾಗಿದೆ. ಸ್ಥಳೀಯ ಜನಪ್ರತಿನಿಧಿಗಳು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಒಡಿಯೂರು ಗುರುಸೇವಾ ಬಳಗದ ಸ್ವಸಹಾಯ ಸಂಘದ ವತಿಯಿಂದಲೂ ವಿರೋಧ ವ್ಯಕ್ತವಾಗಿದೆ. ಈ ಪ್ರದೇಶಬಿಟ್ಟು ಬೇರೆ ಕಡೆ ವೈನ್ಶಾಪ್ ತೆರೆಯುವಂತೆ ಪಂಚಾಯಿತಿ ಸಾಮಾನ್ಯ ಸಭೆಯಲ್ಲೂ ನಿರ್ಣಯವಾಗಿದೆ. ಹೀಗಿದ್ದರೂ ಲೋಕೋಪಯೋಗಿ ಇಲಾಖೆಗೆ ಸೇರಿದ ಈಶ್ವರಮಂಗಲ -ಪಳ್ಳತ್ತೂರು ಅಂತರ್ ರಾಜ್ಯ ಸಂಪರ್ಕ ರಸ್ತೆ ಮಾರ್ಜಿನ್ನಲ್ಲಿರುವ ಹಾಗೂ ಸಾರ್ವಜನಿಕ ಬಸ್ ತಂಗುದಾಣದ ಬಳಿಯಿರುವ ಕಟ್ಟಡದಲ್ಲಿ ಪಂಚಾಯಿತಿ ಅನುಮತಿ ಪಡೆಯದೆ ವೈನ್ಶಾಪ್ ತೆರೆಯುವ ಕೆಲಸ ತೆರೆಯ ಮರೆಯಲ್ಲಿ ನಡೆದಿದೆ. ಕಾನೂನನ್ನು ಪಾಲಿಸಬೇಕಾದ ಅಧಿಕಾರಿಗಳೇ ಲಂಚದ ಆಮಿಷಕ್ಕೆ ಒಳಗಾಗಿ ಮೌನವಹಿಸಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಅವರು ಪಂಚಾಯಿತಿ ಅನುಮತಿ ಪಡೆಯದೆ, ಜನಪ್ರತಿನಿಧಿಗಳ ಹಾಗೂ ವಿವಿಧ ಸಂಘ ಸಂಸ್ಥೆಗಳ ವಿರೋಧವನ್ನೂ ಲೆಕ್ಕಿಸದೆ ಇಲ್ಲಿ ವೈನ್ ಶಾಪ್ ತೆರೆಯುವ ಪ್ರಯತ್ನ ನಡೆದಿರುವ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಈಗಾಗಲೇ ತಿಳಿಸಲಾಗಿದೆ. ಆದರೂ ಪಂಚಾಯಿತಿ ಅನುಮತಿ ಪಡೆಯದ ಕಟ್ಟಡದಲ್ಲಿ ಇದೀಗ ಲಕ್ಷಗಟ್ಟಲೆ ಮೌಲ್ಯದ ಮದ್ಯವನ್ನು ತಂದು ದಾಸ್ತಾನು ಇಡಲಾಗಿದೆ. ಎರಡು ಬಾಟಲಿ ಮದ್ಯ ಕೊಂಡೊಯ್ಯುವವರ ವಿರುದ್ಧ ಕೇಸು ದಾಖಲಿಸಿಕೊಳ್ಳುತ್ತಿರುವ ಪೊಲೀಸರು ಲಕ್ಷಗಟ್ಟಲೆ ಮೊತ್ತದ ಮದ್ಯವನ್ನು ತಂದು ದಾಸ್ತಾರಿಸಿದ್ದರೂ ಸುಮ್ಮನಿದ್ದಾರೆ. ಕಾನೂನು ಕ್ರಮಕೈಗೊಳ್ಳುವ ಬದಲಾಗಿ ಅವರಿಗೆ ರಕ್ಷಣೆ ನೀಡಲು ಹೋರಟಿದ್ದಾರೆ ಎಂದು ಆರೋಪಿಸಿದರು. ಅಧಿಕಾರಿಗಳು ಲಂಚ ಪಡೆದು ಕಾನೂನು ಪಾಲಿಸಲು ಮುಂದಾಗದಿದ್ದಲ್ಲಿ ಗ್ರಾಮಸ್ಥರೇ ಕಾನೂನನ್ನು ಕೈಗೆತ್ತಿಕೊಳ್ಳಬೇಕಾದ ಪರಿಸ್ಥಿತಿ ಬರಬಹುದು. ನ್ಯಾಯಕ್ಕಾಗಿ ನಾವು ಉಗ್ರ ಹೋರಾಟ ಆರಂಭಿಸಬೇಕಾದೀತು ಎಂದು ಎಚ್ಚರಿಸಿದರು. ನೆಟ್ಟಣಿಗೆ ಮುಡ್ನೂರು ಗ್ರಾಮದಲ್ಲಿ ಈಗಾಗಲೇ ಎರಡು ವೈನ್ಶಾಪ್ಗಳಿದ್ದು, ಇಲ್ಲಿ ಅಲ್ಲಲ್ಲಿ ವೈನ್ ಶಾಪ್ಗಳನ್ನು ತೆರೆಯಲು ಇದು ಗೋವವೇ ಎಂದು ಪ್ರಶ್ನಿಸಿದ ಅವರು ದಲಿತರ ಕಾಲೋನಿ , ಮಸೀದಿ, ಸರ್ಕಾರಿ ಶಾಲೆ ಇರುವ ಈ ಪ್ರದೇಶದಲ್ಲಿ ವೈನ್ ಶಾಪ್ ತೆರೆಯಲು ಅವಕಾಶ ನೀಡುವುದಿಲ್ಲ. ಅಧಿಕಾರಿಗಳು ಲಂಚಕ್ಕಾಗಿ ಈ ರೀತಿ ಮಾಡಲು ಹೊರಟರೆ ನಾವು ಸಹಿಸುವುದಿಲ್ಲ. ದಲಿತರಿಗೆ ,ಅಲ್ಪಸಂಖ್ಯಾತರಿಗೆ ಅನ್ಯಾಯವಾದರೆ ಸಾಮೂಹಿಕ ಹೋರಾಟ ಆರಂಭಿಸುತ್ತೇವೆ. ತಾನೇ ಹೋರಾಟದ ನೇತೃತ್ವ ವಹಿಸುತ್ತೇನೆ. ಈ ವಿಚಾರದಲ್ಲಿ ಪ್ರಾಣ ಕೊಡಲೂ ಸಿದ್ಧನಿದ್ದೇನೆ ಎಂದು ಅವರು ತಿಳಿಸಿದರು. ತಾಲೂಕು ಪಂಚಾಯಿತಿ ಸದಸ್ಯೆ ಫೌಝಿಯಾ ಇಬ್ರಾಹಿಂ ಅವರು ಮಾತನಾಡಿ ದಲಿತ ಕಾಲೋನಿ, ಶಾಲೆ ಮತ್ತು ಮಸೀದಿ ಇರುವ ಈ ಪ್ರದೇಶವು ಸೂಕ್ಷ್ಮ ಪ್ರದೇಶವಾಗಿದ್ದು, ಇಲ್ಲಿ ಸರ್ವೆ ನಡೆಸದೆ ಏಕಾಏಕಿಯಾಗಿ ವೈನ್ಶಾಪ್ ತೆರೆಯಲು ಅವಕಾಶ ನೀಡಬೇಡಿ. ಇದಕ್ಕೆ ನಮ್ಮೆಲ್ಲರ ವಿರೋಧವಿದೆ . ಇದರಲ್ಲಿ ರಾಜಕೀಯವಿಲ್ಲ ಎಂದರು. ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶ್ರೀರಾಮ ಪಕ್ಕಳ, ಸದಸ್ಯರಾದ ರಮೇಶ್ ರೈ ಸಾಂತ್ಯ ಮತ್ತು ಮಹಮ್ಮದ್ ಕುಂಞಿ ಕೆ.ಎಂ, ಕಾವು ಬುಶ್ರಾ ವಿದ್ಯಾ ಸಂಸ್ಥೆಯ ಸಂಚಾಲಕ ಅಬ್ದುಲ್ ಅಝೀರ್ , ನಿಜಾಮುದ್ದೀನ್ ಮತ್ತಿತರರು ಮಾತನಾಡಿ ವೈನ್ಶಾಪ್ ತೆರೆಯುವುದಕ್ಕೆ ವಿರೋಧ ವ್ಯಕ್ತಪಡಿಸಿದರು,
ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯಿತಿ ಸದಸ್ಯ ಇಬ್ರಾಹಿಂ ಕೆ. ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಂಕರಿ ಭಂಡಾರಿ, ಸದಸ್ಯರಾದ ಮಹಮ್ಮದ್ ಮೇನಾಲ, ಸುಧಾಕರ ನಾಯ್ಕಾ, ಅಬ್ದುಲ್ಕುಂಞಿ, ಜಯಕರ್ನಾಟಕ ಸಂಘಟನೆಯ ನೆಟ್ಟಣಿಗೆ ಮುಡ್ನೂರು ಗ್ರಾಮ ಸಮಿತಿಯ ಅಧ್ಯಕ್ಷ ಅಬ್ದುಲ್ ರಹಿಮಾನ್, ಜಗನ್ನಾಥ ರೈ ಕಾವು ಮತ್ತಿತರರು ಇದ್ದರು. ಗ್ರಾಮ ಪಂಚಾಯಿತಿ ಸದಸ್ಯ ರಾಮ ಮೇನಾಲ ಅವರು ಕಾರ್ಯಕ್ರಮ ನಿರೂಪಿಸಿದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುನಿಲ್ ಅವರು ಪಂಚಾಯತ್ ಪರವಾನಿಗೆ ಪಡೆಯದೆ ವೈನ್ಶಾಪ್ ತೆರೆಯಲು ಉದ್ದೇಶಿಸಿರುವ ನವೀನ್ ನಾಕ್ ಅವರಿಗೆ ನೋಟೀಸು ಜಾರಿಗೊಳಿಸಲಾಗಿದೆ ಎಂದರು. ಪಂಚಾಯಿತಿ ವತಿಯಿಂದ ಪರವಾನಿಗೆ ನೀಡದೆ ವೈನ್ಶಾಪ್ ಆರಂಭಿಸಲು ಆಗುವುದಿಲ್ಲ ಎಂದು ಅವರು ಈ ಸಂದರ್ಭದಲ್ಲಿ ಪ್ರತಿಭಟನಾಕಾರರಿಗೆ ಸ್ಪಷ್ಟಪಡಿಸಿದರು. ಬ್ಯಾನರ್ ತೆರವು
ಪ್ರತಿಭಟನೆ ನಡೆದ ಸ್ಥಳದ ಒಂದು ಕಡೆಯಲ್ಲಿ ವೈನ್ ಶಾಪ್ ತೆರೆಯುವುದಕ್ಕೆ ವಿರೋಧ ವ್ಯಕ್ತಪಡಿಸಿ ಮತ್ತು ಮತ್ತೊಂದು ಕಡೆಯಲ್ಲಿ ತೆರೆಯುವುದಕ್ಕೆ ಬೆಂಬಲ ವ್ಯಕ್ತಪಡಿಸಿ ಬ್ಯಾನರ್ ಅಳವಡಿಸಲಾಗಿತ್ತು. ಸ್ಥಳಕ್ಕಾಗಮಿಸಿದ ಪೊಲೀಸರ ಸಹಕಾರದೊಂದಿಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯವರು ಅನಧಿಕೃತವಾಗಿ ಅಳವಡಿಸಲಾಗಿದ್ದ ಈ ಎರಡೂ ಬ್ಯಾನರ್ಗಳನ್ನು ತೆರವುಗೊಳಿಸಿದರು. ಫೋಟೋ 26ಪಿಟಿಆರ್1 : ಪುತ್ತೂರು ತಾಲ್ಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಪಂಚೋಡಿ (ಓಣಿಯಡ್ಕ) ಎಂಬಲ್ಲಿ ಪರಿಶಿಷ್ಟ ಜಾತಿಯ ಕಾಲೋನಿಯಲ್ಲಿ ವೈನ್ಶಾಪ್ ತೆರೆಯಲು ಮುಂದಾಗಿರುವುದನ್ನು ವಿರೋಧಿಸಿ ಗ್ರಾಮಸ್ಥರು ಶುಕ್ರವಾರ ಪಂಚೋಡಿಯಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿರುವುದು.







