ಬೆಂಗಳೂರು: ಶಾಲಾ ಮಕ್ಕಳಿಗೆ ಬೇಸಿಗೆ ರಜೆಯಲ್ಲೂ ಮಧ್ಯಾಹ್ನದ ಬಿಸಿಯೂಟ
ಬೆಂಗಳೂರು.ಮಾ.26: ರಾಜ್ಯದಲ್ಲಿ ಬರಪರಿಸ್ಥಿತಿ ಇರುವ ಹಿನ್ನೆಲೆಯಲ್ಲಿ ಅಭಾವ ಸ್ಥಿತಿಯಿರುವ ತಾಲ್ಲೂಕುಗಳ ಶಾಲಾ ಮಕ್ಕಳಿಗೆ ಬೇಸಿಗೆ ರಜೆಯಲ್ಲೂ ಮಧ್ಯಾಹ್ನದ ಬಿಸಿಯೂಟ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಸಂಬಂಧ ಸುತ್ತೊಲೆ ಹೊರಡಿಸಲಾಗಿದ್ದು, ಬೇಸಿಗೆ ಮುಗಿಯುವ ತನಕ ಬಿಸಿಯೂಟ ಒದಗಿಸುವಂತೆ ಸೂಚಿಸಲಾಗಿದೆ. 136 ತಾಲ್ಲೂಕುಗಳು ಬರಗಾಲದಿಂದ ತತ್ತರಿಸಿದ್ದು, ಜನ ಗುಳೆ ಎದ್ದು ಹೋಗದಂತೆ ಹಾಗೂ ಶಾಲಾ ಮಕ್ಕಳ ಪಾಠ ಪ್ರವಚನಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಸರ್ಕಾರ ಈ ಕ್ರಮ ಕೈಗೊಂಡಿದೆ. ಇದೇ ಕಾರಣಕ್ಕಾಗಿ ಬರಪೀಡಿತ ತಾಲ್ಲೂಕುಗಳ ಶಾಲೆಗಳಿಗೆ ಹೆಚ್ಚುವರಿಯಾಗಿ 9 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿರುವ ಸರ್ಕಾರ,ಬೇಸಿಗೆ ಮುಗಿಯುವವರೆಗೆ ಪರಿಸ್ಥಿತಿಯನ್ನು ಸಮರೋಪಾದಿಯಲ್ಲಿ ಎದುರಿಸಬೇಕು ಎಂದು ನಿರ್ದೇಶನ ನೀಡಿದೆ.
ಬರದಿಂದ ತತ್ತರಿಸುವ ತಾಲ್ಲೂಕುಗಳಲ್ಲಿ ಕುಡಿಯುವ ನೀರು, ಉದ್ಯೋಗ, ಮೇವಿನ ಸಮಸ್ಯೆ ಭಾರೀ ಪ್ರಮಾಣದಲ್ಲಿರುವುದರಿಂದ ವಲಸೆ ಹೋಗುವುದನ್ನು ತಪ್ಪಿಸುವುದು ಒಂದು ಭಾಗವಾದರೆ ಮಕ್ಕಳು ಶಾಲೆಗೆ ಬರುವುದು ಒಂದು ಭಾಗ. ಈವರೆಗೂ ಬೇಸಿಗೆಯ ರಜಾ ದಿನಗಳಲ್ಲಿ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುತ್ತಿರಲಿಲ್ಲ. ಬರ ಪೀಡಿದ ತಾಲ್ಲೂಕಿನ 27 ಲಕ್ಷ ಶಾಲಾ ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳಲಿದ್ದಾರೆ.
ಮೂಲಗಳ ಪ್ರಕಾರ,ಪ್ರತಿ ದಿನ ಶಾಲಾ ಮಕ್ಕಳಿಗೆ ಚಿತ್ರಾನ್ನ, ಪುಳಿಯೋಗರೆ, ಉಪ್ಪಿಟ್ಟು, ಮೊಸರನ್ನ, ವೆಜಿಟಬಲ್ ಪಲಾವ್, ಬಾಳೆಹಣ್ಣು ನೀಡುವಂತೆ ಸೂಚನೆ ಕೊಡಲಾಗಿದೆ.
ಸಾಮಾನ್ಯವಾಗಿ ಶೈಕ್ಷಣಿಕ ವರ್ಷ ಮುಗಿದ ಬಳಿಕ ಮಧ್ಯಾಹ್ನದ ಬಿಸಿಯೂಟ ನೀಡುತ್ತಿರಲಿಲ್ಲ. ಈ ಬಾರಿ ಬರಗಾಲ ಆವರಿಸಿರುವ ಹಿನ್ನೆಲೆಯಲ್ಲಿ ರೈತರು ಸಂಕಷ್ಟದಲ್ಲಿರುವುದರಿಂದ ಮಕ್ಕಳಿಗೆ ಪೌಷ್ಠಿಕಾಂಶದ ಕೊರತೆ ಉಂಟಾಗಬಾರದೆಂಬ ಕಾರಣಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ.
ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಆಯಾ ಶಾಲೆಯ ಮುಖ್ಯೋಪಾಧ್ಯಾಯರಿಗೆ ವಹಿಸಲಾಗಿದೆ. ಶಿಕ್ಷಕರು ಪ್ರತಿದಿನ ಕಡ್ಡಾಯವಾಗಿ ಶಾಲೆಗೆ ಹಾಜರಾಗಿ ಊಟದ ಉಸ್ತುವಾರಿ ನೋಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಗೈರು ಹಾಜರಾಗಬಾರದು. ಮುಖ್ಯೋಪಾಧ್ಯಾಯರಿಗೆ ಸಹ ಶಿಕ್ಷಕರು ಕೂಡ ಸಹಕರಿಸುವಂತೆ ನಿರ್ದೇಶನ ನೀಡಲಾಗಿದೆ.
ಒಂದು ವೇಳೆ ಯಾರಾದರೂ ಗೈರು ಹಾಜರಾದರೆ ಅಂತಹ ಶಿಕ್ಷಕರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಇಲಾಖೆ ತಿಳಿಸಿದೆ.