ಇದೆಂತಹಾ ಪ್ರೀತಿ ? ಪ್ರೇಮಿಯೊಂದಿಗೆ ಸೇರಿ 7 ವರ್ಷದ ಮಗಳನ್ನೇ ಕೊಂದ ತಾಯಿ !

ಘಾಝಿಯಾಬಾದ್ , ಮಾ. ೨೬ : ಜಗತ್ತಿನಲ್ಲಿ ಕೆಟ್ಟ ಮಕ್ಕಳಿರಬಹುದು ಆದರೆ ಕೆಟ್ಟ ತಾಯಿ ಇರಲು ಸಾಧ್ಯವಿಲ್ಲ ಎಂಬ ಮಾತು ನೀವು ಕೇಳಿರಬಹುದು. ತೀರಾ ಇತ್ತೀಚಿನವರೆಗೂ ಅದು ಸತ್ಯವೇ ಆಗಿತ್ತು. ಆದರೆ ಈಗಲ್ಲ. ಈ ದುರಂತ ( ನೈಜ ) ಕತೆ ಕೇಳಿದ ಮೇಲೆ ನೀವು ಖಂಡಿತ ಕ್ಷಣ ಬಾಯಿಂದ ಮಾತು ಹೊರಡದೆ ಬೆಚ್ಚಿ ಬೀಳುವುದು ಖಚಿತ.
ಆ ದಂಪತಿಗೆ ಏಳರ ಹರೆಯದ ಮಗಳಿದ್ದಳು. ಆದರ್ ಪತ್ನಿಗೆ ಬೇರೊಬ್ಬನೊಂದಿಗೆ ಪ್ರೀತಿ, ಸಂಬಂಧ. ಒಂದು ದಿನ ಆ ವ್ಯಕ್ತಿಯೊಂದಿಗೆ ತನ್ನ ತಾಯಿಯನ್ನು ಈ ಪುಟ್ಟ ಬಾಲೆ ನೋಡಿದ್ದಾಳೆ. ಮುಗ್ಧವಾಗಿ ಅದನ್ನು ತನ್ನ ತಂದೆಗೆ ತಿಳಿಸಿದ್ದಾಳೆ. ಅಷ್ಟೇ. ಇದ್ದಕ್ಕಿದ್ದಂತೆ ಒಂದು ದಿನ ಆಕೆ ಕಾಣೆಯಾಗಿದ್ದಾಳೆ. " ಅಂಗಡಿಗೆ ಸಾಮಾನು ತರಲು ಹೋಗಿದ್ದಳು. ತಂದು ಕೊಟ್ಟ ಬಳಿಕ ಎರಡು ರೂಪಾಯಿ ತೆಗೆದುಕೊಂಡು ಚಾಕೊಲೆಟ್ ತರಲು ಹೋದವಳು ವಾಪಸ್ ಬಂದಿಲ್ಲ " ಎಂದು ಆಕೆಯ ತಾಯಿ ಮಗಳು ಎಲ್ಲಿದ್ದಾಳೆ ಎಂದು ಕೇಳಿದ ಪತಿಗೆ ಹೇಳಿದ್ದಾಳೆ. ಪೊಲೀಸ್ ದೂರು ದಾಖಲಿಸಿ ಎಲ್ಲ ಕಡೆ ಹುಡುಕಾಡಿದ ಮೇಲೆ ಮರುದಿನ ಪತ್ತೆಯಾಗಿದ್ದಾಳೆ. ಖಾಲಿ ಜಾಗವೊಂದರಲ್ಲಿ ಗೋಣಿ ಚೀಲದಲ್ಲಿ ಶವವಾಗಿ ! ಈಗ ತಾಯಿ ಹಾಗು ಆಕೆಯ ಪ್ರಿಯಕರ ಜೈಲು ಸೇರಿದ್ದಾರೆ. ತಾವಿಬ್ಬರೇ ಸೇರಿಕೊಂಡು ಈ ಮಹಾ ಪಾತಕ ಕೆಲಸ ಮಾಡಿದ್ದೇವೆ ಎಂದು ತಪ್ಪೊಪ್ಪಿಗೆ ನೀಡಿದ್ದಾರೆ !
ದೆಹಲಿ ಸಮೀಪದ ಘಾಝಿಯಾಬಾದ್ ನಲ್ಲಿ ನಡೆದ ಘಟನೆಯಿದು. ಮಗುವಿನ ಹೆಸರು ಇಕ್ರಾ. ಹಂತಕ ತಾಯಿ ರಶೀದ , ಆಕೆಯ ಪ್ರಿಯಕರ ಶಾನವಾಝ್. ಮಗುವಿನ ತಂದೆಯ ಹೆಸರು ಯಾಸೀನ್.
ಇದೆಂತಹಾ ಪ್ರೀತಿ ! ?





