ಬೆಂಗಳೂರು: ಪ್ರತಿನಿತ್ಯ 6ರಿಂದ 9ರ ವರೆಗೆ ವಿದ್ಯುತ್ ಕಡಿತ ಇಲ್ಲ

ಬೆಂಗಳೂರು, ಮಾ. 26: ದ್ವಿತೀಯ ಪಿಯುಸಿ, ಎಸೆಸೆಲ್ಸಿ ಪರೀಕ್ಷೆ ಹಿನ್ನೆಲೆಯಲ್ಲಿ ರಾಜ್ಯದ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಪ್ರತಿನಿತ್ಯ ಬೆಳಗ್ಗೆ 6ರಿಂದ 9 ಮತ್ತು ಸಂಜೆ 6ರಿಂದ ರಾತ್ರಿ 9ಗಂಟೆಯ ವರೆಗೆ ವಿದ್ಯುತ್ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಆಗದಂತೆ ಕ್ರಮ ಕೈಗೊಳ್ಳಬೇಕೆಂದು ಇಂಧನ ಇಲಾಖೆಗೆ ಸೂಚಿಸಲಾಗಿದೆ.
ಶನಿವಾರ ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ (ಕೆಪಿಟಿಸಿಎಲ್)ನ ವ್ಯವಸ್ಥಾಪಕ ನಿದೇಶಕರಿಗೆ ಸೂಚನೆ ನೀಡಲಾಗಿದೆ. ಘೋಷಿಸಿದಂತೆ ಕಡ್ಡಾಯವಾಗಿ ಅಡಚಣೆ ರಹಿತ ಸಮರ್ಪಕ ವಿದ್ಯುತ್ ಪೂರೈಸುವಂತೆ ಹಾಗೂ ಈ ಸಮಯದಲ್ಲಿ ವಿದ್ಯುತ್ ಸರಬರಾಜಿನ ಮೇಲ್ವಿಚಾರಣೆ ನಡೆಸಿ ಸುಗಮ ರೀತಿಯಲ್ಲಿ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳಬೇಕೆಂದು ಆದೇಶಿಸಲಾಗಿದೆ.
ಬೆಸ್ಕಾಂ, ಸೆಸ್ಕಾಂ, ಮೆಸ್ಕಾಂ, ಹೆಸ್ಕಾಂ ಹಾಗೂ ಜೆಸ್ಕಾಂ ಸೇರಿದಂತೆ ಎಲ್ಲ ನಿಗಮಗಳು ರಾಜ್ಯದ ಎಲ್ಲ ಪ್ರದೇಶಗಳಿಗೆ ಮೇಲ್ಕಂಡ ಘೋಷಿತ ಸಮಯದಲ್ಲಿ ವಿದ್ಯುತ್ ಪೂರೈಕೆ ಮಾಡಬೇಕೆಂದು ಸೂಚಿಸಲಾಗಿದೆ.
ಈ ಮಧ್ಯೆ ವಿಧಾನಸಭೆಯಲ್ಲಿ ಮಾ.24ರಂದು ನಡೆದ ವಿದ್ಯುತ್ ಸಮಸ್ಯೆ ಮೇಲಿನ ಚರ್ಚೆಗೆ ಉತ್ತರ ನೀಡಿದ ಇಂಧನ ಸಚಿವ ಶಿವಕುಮಾರ್, ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ವಿದ್ಯುತ್ ಪೂರೈಕೆ ಮಾಡಲಾಗುವುದು ಎಂದು ಭರವಸೆ ನೀಡಿದ್ದರು. ಅದರನ್ವಯ ಇದೀಗ ಅಧಿಕೃತ ಆದೇಶ ಹೊರಡಿಸಲಾಗಿದೆ.





