ಮಂಗಳೂರು : ಸಾಕ್ಷರತಾ ರಥಕ್ಕೆ ಚಾಲನೆ

ಮಂಗಳೂರು, ಮಾ. 26: ನಗರದ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಶನಿವಾರ ಕಾನೂನು ಸಾಕ್ಷರತಾ ರಥ ಮತ್ತು ಸಂಚಾರಿ ಜನತಾ ನ್ಯಾಯಾಲಯ ಅಭಿಯಾನಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಉಮಾ ಎಂ.ಜಿ. ಚಾಲನೆ ನೀಡಿದರು.
ಅವರು ಮಾತನಾಡಿ,ಸಂಚಾರಿ ಜನತಾ ನ್ಯಾಯಾಲಯ ಅಭಿಯಾನದಲ್ಲಿ ಸಂಧಾನ ಮೂಲಕ ವಿವಿಧ ನ್ಯಾಲಾಯಗಳಲ್ಲಿ ಬಾಕಿ ಇರುವ ಪ್ರಕರಣಗಳ ಇತ್ಯರ್ಥಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದರು.
ಕಾನೂನು ಸಾಕ್ಷರತಾ ರಥ ಮತ್ತು ಸಂಚಾರಿ ಜನತಾ ನ್ಯಾಯಾಲಯ ಅಭಿಯಾನದ ಪ್ರಯೋಜನ ಜನಸಾಮಾನ್ಯರಿಗೆ ತಲುಪುತ್ತಿದೆಯೇ ಎಂಬ ಬಗ್ಗೆಯೂ ಅವಲೋಕನ ಅಗತ್ಯವಿದೆ. ಜನರಿಗೆ ಕಾನೂನಿನ ಬಗ್ಗೆ ಸ್ಪಷ್ಟ ಮಾಹಿತಿಯನ್ನೂ ನೀಡಬೇಕಾಗಿದೆ ಎಂದವರು ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿಯಾದ ಹಿರಿಯ ಸಿವಿಲ್ ನ್ಯಾಯಾಧೀಶ ಗಣೇಶ ಬಿ. ಮಾತನಾಡಿ, ಜಿಲ್ಲಾ ಮತ್ತು ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ ವತಿಯಿಂದ ಕಾನೂನು ಸಾಕ್ಷರತಾ ರಥ ಮತ್ತು ಸಂಚಾರಿ ಜನತಾ ನ್ಯಾಯಾಲಯ ಅಭಿಯಾನ ಅಂಗವಾಗಿ ಮಾಚ್ 7ರಿಂದ 24ರವರೆಗೆ ಬೆಳ್ತಂಗಡಿ, ಸುಳ್ಯ, ಪುತ್ತೂರು, ಬಂಟ್ವಾಳ ತಾಲೂಕಿನಲ್ಲಿ ಒಟ್ಟು 56 ಕಾರ್ಯಕ್ರಮ ನಡೆಸಲಾಗಿದೆ. 34 ಪ್ರಕರಣ ಇತ್ಯರ್ಥಪಡಿಸಲಾಗಿದೆ. ಈ ಪೈಕಿ 20 ಸಿವಿಲ್, 14 ಕ್ರಿಮಿನಲ್ ಪ್ರಕರಣ. 2015ರ ಜನವರಿ 1ರಿಂದ ಡಿಸೆಂಬರ್ 31ರವರೆಗೆ ಲೋಕ ಅದಾಲತ್ ಮೂಲಕ ಜಿಲ್ಲೆಯಲ್ಲಿ 154147 ಪ್ರಕರಣ ಇತ್ಯರ್ಥಪಡಿಸಲಾಗಿದೆ. ಈ ಪೈಕಿ 2088 ಸಿವಿಲ್, 868 ಕ್ರಿಮಿನಲ್ ಮತ್ತು 137191 ದಾವೆ ಪೂರ್ವ ಪ್ರಕರಣಗಳು ಸೇರಿವೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆ ಶೇ. 100ರಷ್ಟು ಅಕ್ಷರ ಸಾಕ್ಷರತೆ ಪಡೆದಿದೆ. ಜನರಿಗೆ ಕಾನೂನು ಅರಿವು ಕೂಡಾ ಇದೆ. ಇದರಿಂದಾಗಿ ಆಡಳಿತದಲ್ಲಿ ಕಾನೂನಿನ ತಪ್ಪು ವ್ಯಾಖ್ಯಾನ ಆಗುತ್ತಿದೆ ಎಂದರು.
ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಎಸ್.ಪಿ. ಚಂಗಪ್ಪ, ಹಿರಿಯ ಸಿವಿಲ್ ನ್ಯಾಯಾಧೀಶ ಗಣೇಶ ಬಿ. ಜಿಲ್ಲಾ ಪಂಚಾಯಿತಿ ಸಿಇಒ ಪಿ.ಐ. ಶ್ರೀವಿದ್ಯಾ, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಶರಣಪ್ಪ ಎಸ್.ಡಿ., ಡಿಸಿಪಿ ಸಂಜೀವ್ ಪಾಟೀಲ್, ಮನಪಾ ಆಯುಕ್ತ ಡಾ. ಎಚ್.ಎನ್. ಗೋಪಾಲಕೃಷ್ಣ, ಉಪ ಸಾರಿಗೆ ಆಯುಕ್ತ ಜಿ.ಎಸ್. ಹೆಗಡೆ, ಸಹಾಯಕ ಕಾರ್ಮಿಕ ಆಯುಕ್ತ ಡಿ.ಜಿ. ನಾಗೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಸುಂದರ ಪೂಜಾರಿ, ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ ಉಪಸ್ಥಿತರಿದ್ದರು.
ಕಾನೂನು ಸಾಕ್ಷರತಾ ರಥ ಮಾ. 30ರವರೆಗೆ ಮಂಗಳೂರು ತಾಲೂಕಿನಾದ್ಯಂತ ಸಂಚರಿಸಲಿದೆ.







