ಸರ್ಕಾರದ ಅನುದಾನವನ್ನು ಸರಿಯಾದ ರೀತಿಯಲ್ಲಿ ಸದುಪಯೋಗಪಡಿಸಿದಲ್ಲಿ ಗ್ರಾಮಗಳ ಅಭಿವೃದ್ದಿಯಾಗಲು ಸಾಧ್ಯ - ಕೆ.ಅಭಯಚಂದ್ರ

ಮುಲ್ಕಿ,ಮಾ,26: ಸರ್ಕಾರದ ಅನುದಾನವನ್ನು ಸರಿಯಾದ ರೀತಿಯಲ್ಲಿ ಸದುಪಯೋಗಪಡಿಸಿದಲ್ಲಿ ಗ್ರಾಮಗಳ ಅಭಿವೃದ್ದಿಯಾಗಲು ಸಾಧ್ಯವಿದ್ದು ಜನ ಪ್ರತಿನಿಧಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯ ಮಾಡಬೇಕೆಂದು ರಾಜ್ಯ ಯುವಜನ ಮತ್ತು ಮೀನುಗಾರಿಕಾ ಸಚಿವ ಕೆ.ಅಭಯಚಂದ್ರ ಹೇಳಿದರು.
ಮೂಲ್ಕಿಯ ಕೆ ಎಸ್ ರಾವ್ ನಗರದ ದ.ಕ.ಜಿಲ್ಲಾ ಪಂಚಾಯತ್ ಫ್ರೌಢಶಾಲೆಯಲ್ಲಿ ಫ್ರೌಢಶಾಲೆಗೆ 84.5 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿದ 9 ಶಾಲಾ ಕೊಠಡಿಗಳ ಎರಡು ಹಂತಸ್ತಿನ ಕಟ್ಟಡ ಹಾಗೂ ಶಾಸಕರ ನಿಧಿಯಲ್ಲಿ 5 ಲಕ್ಷ ವೆಚ್ಚದಲ್ಲಿ ನವೀಕರಿಸಿ ನಿರ್ಮಿಸಲಾದ ಪ್ರಾಥಮಿಕ ಶಾಲೆಯ ಕಟ್ಟಡದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು ತೀರ ಬಡವರು ಇಲ್ಲಿನ ಶಾಲೆಯಲ್ಲಿ ಕಲಿಯುತ್ತಿದ್ದು ಶಾಲೆಗೆ ಕ್ರೀಡಾಂಗಣ ವಿಸ್ತರಣೆಗೆ ಹಾಗೂ ಶಾಲೆಯ ಅಭಿವೃದ್ದಿಯ ನಿಟ್ಟಿನಲ್ಲಿ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂಸದ ನಳಿನ್ ಕುಮಾರ್ ಕಟೀಲುರವರು ಕೇಂದ್ರ ಸಕಾರವು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದು ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಉತ್ತಮ ವ್ಯಕ್ತಿಗಳಾಗಿ ರೂಪುಕೊಂಡಲ್ಲಿ ಶಿಕ್ಷಣ ಸಂಸ್ಥೆಗೆ ಹೆಮ್ಮೆಯೆಂದು ಹೇಳಿದರು.
ಮೂಲ್ಕಿ ನಗರ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಬಂಗೇರ,ಮುಖ್ಯಾಧಿಕಾರಿ ವಾಣಿ ಆಳ್ವ,ಸದಸ್ಯರಾದ ಶೈಲೇಶ್,ಬಿ ಎಂ ಆಸೀಫ್,ವಿಮಲಾ ಪೂಜಾರಿ,ಶಂಕ್ರವ್ವ,ಕಲಾವತಿ,ಬಶೀರ್ ಕುಳಾಯಿ,ಪುತ್ತು ಬಾವು,ಕ್ಷೇತ್ರ ಶಿಕ್ಷಣಾಧಿಕಾರಿ ರಾಜಲಕ್ಷ್ಮೀ,ಫ್ರೌಢ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ವಿಂದ್ಯಾ ಕಿಣಿ,ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸುಮತಿ ಬಾಯಿ ಮತ್ತಿತರರು ಉಪಸ್ತಿತರಿದ್ದರು.
ರಾಷ್ತ್ರೀಯ ಹೆದ್ದಾರಿಯ ಆಮೆಗತಿ ಕಾಮಗಾರಿ ಬಗ್ಗೆ ಮಾರ್ಚ್ 28 ರಂದು ಕೇಂದ್ರ ಹೆದ್ದಾರಿ,ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಜಿಲ್ಲೆಗೆ ಭೇಟಿ ನೀಡುವ ಸಂದರ್ಭದಲ್ಲಿ ಚರ್ಚಿಸಲಾಗುವುದು.ಮೂಲ್ಕಿ ಪೇಟೆಯ ಹೆದ್ದಾರಿ ಸಮಸ್ಯೆ ಪರಿಹರಿಸಲಾಗುವುದು.ಹಳೆಯಂಗಡಿ ರೈಲ್ವೆ ಕ್ರಾಸಿಂಗ್ ಸಮಸ್ಯೆ ಬಗ್ಗೆ ಫ್ಲೈ ಓವರ್ ರಚನೆ ಬಗ್ಗೆ ರೈಲ್ವೆ ಇಲಾಖೆ ಹಾಗೂ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಶೀಘ್ರದಲ್ಲಿ ಸಮಸ್ಯೆ ಬಗೆಹರಿಯಲಿದೆಯೆಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.ಮೂಲ್ಕಿಯ ಕೆ ಎಸ್ ರಾವ್ ನಗರಕ್ಕೆ ಭೇಟಿ ನೀಡಿ ಸಂದರ್ಭದಲ್ಲಿ ಅವರು ತಿಳಿಸಿದರು.







