ಮಡಿಕೇರಿ: ಕಾಡಾನೆ ಹಾವಳಿ ತಡೆಗೆ ಎಸ್‌ಡಿಪಿಐ ಒತ್ತಾಯ

ಮಡಿಕೇರಿ, ಮಾ.26: ಕೊಡಗು ಜಿಲ್ಲೆಯಲ್ಲಿ ಮಿತಿ ಮೀರಿರುವ ಕಾಡಾನೆ ಹಾವಳಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದ ಪ್ರಮುಖರು ಅರಣ್ಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ನಗರದ ಅರಣ್ಯ ಭವನದಲ್ಲಿ ಅರಣ್ಯಾಧಿಕಾರಿಗಳನ್ನು ಭೇಟಿಯಾಗಿ ಕಾರ್ಮಿಕರ ಸಂಕಷ್ಟವನ್ನು ಮನವರಿಕೆ ಮಾಡಿಕೊಟ್ಟ ಪ್ರಮುಖರು ಶಾಶ್ವತ ಪರಿಹಾರಕ್ಕಾಗಿ ಒತ್ತಾಯಿಸಿದರು. ಜಿಲ್ಲೆಯಲ್ಲಿರುವ ಬಹುತೇಕ ಕಾರ್ಮಿಕರು ಕಾಫಿ ತೋಟದ ಕೆಲಸವನ್ನೇ ಅವಲಂಬಿಸಿದ್ದು, ಹೊಟ್ಟೆ ಪಾಡಿಗಾಗಿ ದುಡಿಯುವ ಸಂದರ್ಭ ಏಕಾಏಕಿ ಕಾಡಾನೆಗಳು ದಾಳಿ ಮಾಡಿ ಜೀವವನ್ನು ಬಲಿತೆಗೆದುಕೊಳ್ಳುತ್ತಿವೆ. ಗ್ರಾಮೀಣ ಪ್ರದೇಶ ಹಾಗೂ ಕಾಫಿ ತೋಟಗಳಲ್ಲೇ ಕಾಡಾನೆಗಳು ಬೀಡು ಬಿಟ್ಟು ಆತಂಕವನ್ನು ಸೃಷ್ಟಿಸುತ್ತಿರುವ ಬೆಳವಣಿಗೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿದೆ. ಪ್ರತಿ ವರ್ಷ ಅರಣ್ಯ ಅಭಿವೃದ್ಧಿ ಹಾಗೂ ವನ್ಯ ಜೀವಿ ಸಂರಕ್ಷಣೆಯ ಹೆಸರಿನಲ್ಲಿ ಕೋಟ್ಯಂತರ ರೂ. ಖರ್ಚು ಮಾಡಲಾಗುತ್ತಿದೆಯಾದರೂ ಇವುಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಂಶಯಗಳು ಮೂಡಿದೆಯೆಂದು ಎಸ್‌ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಫಝಲುಲ್ಲಾ ಆರೋಪಿಸಿದರು.
ಪ್ರತಿ ವರ್ಷ ಆನೆ ಕಂದಕ, ಸೋಲಾರ್ ಬೇಲಿ ನಿರ್ಮಾಣ, ಅರಣ್ಯದೊಳಗೆ ರಸ್ತೆ, ಮೋರಿ, ಕೆರೆ ನಿರ್ಮಾಣ, ಹರಿಯುವ ನೀರಿಗೆ ಒಡ್ಡು ಕಟ್ಟುವ ಕಾಮಗಾರಿ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿರುವ ಬಗ್ಗೆ ಕಡತಗಳಲ್ಲಿ ಮಾಹಿತಿ ಇದೆ. ಆದರೆ, ಇವುಗಳು ಅನುಷ್ಠಾನ ಗೊಂಡಿದ್ದರೆ ಕಾಡಾನೆಗಳು ನಾಡಿಗೆ ಯಾಕೆ ಬರುತ್ತಿದ್ದವು ಎಂದು ಅವರು ಪ್ರಶ್ನಿಸಿದರು.
ಕೊಡಗಿನ ಕಾಡುಗಳಲ್ಲಿ ಸಾಗುವಾನಿ ತೋಪುಗಳು ಯಥೇಚ್ಛವಾಗಿದ್ದು, ಇವು ಮರಗಳ್ಳರಿಗಷ್ಟೇ ಲಾಭ ತಂದುಕೊಟ್ಟಿವೆ, ಆದರೆ ವನ್ಯ ಜೀವಿಗಳು ಆಹಾರದ ಕೊರತೆ ಎದುರಿಸುತ್ತಿವೆ. ಆದ್ದರಿಂದ ವನ್ಯ ಜೀವಿಗಳಿಗೆ ಆಹಾರಕ್ಕೆ ಪೂರಕವಾದ ಅರಣ್ಯಾಭಿವೃದ್ಧಿ ಮಾಡಬೇಕೆಂದು ಒತ್ತಾಯಿಸಿದ ಉಪಾಧ್ಯಕ್ಷ ಲಿಯಾಕತ್ ಅಲಿ, ಅರಣ್ಯ ಇಲಾಖೆಯ ವತಿಯಿಂದ ಟಾಸ್ಕ್ ಫೋರ್ಸ್‌ಗಳನ್ನು ನಿಯೋಜಿಸಿ ಕಾರ್ಮಿಕರ ಹಾಗೂ ಸಾರ್ವಜನಿಕರ ಜೀವವನ್ನು ರಕ್ಷಿಸಬೇಕೆಂದು ಒತ್ತಾಯಿಸಿದರು.
ಆನೆ ದಾಳಿಯಿಂದ ಮೃತಪಟ್ಟ ಕುಟುಂಬಗಳಿಗೆ 10 ಲಕ್ಷ ರೂ. ಪರಿಹಾರ ನೀಡಬೇಕು ಮತ್ತು ಕುಟುಂಬದ ಸದಸ್ಯರಿಗೆ ಅರಣ್ಯ ಇಲಾಖೆಯಲ್ಲಿ ನೌಕರಿ ನೀಡಬೇಕು, ಗಾಯಾಳುಗಳ ಸಂಪೂರ್ಣ ವೈದ್ಯಕೀಯ ವೆಚ್ಚವನ್ನು ಇಲಾಖೆ ಭರಿಸಬೇಕು ಮತ್ತು ಕಾಡಾನೆ ಹಾವಳಿ ಹೆಚ್ಚಿರುವ ಪ್ರದೇಶಗಳಲ್ಲಿ ಆ್ಯಂಬುಲೆನ್ಸ್ ವ್ಯವಸ್ಥೆ ಕಲ್ಪಿಸಬೇಕೆಂದು ಎಸ್‌ಡಿಪಿಐ ಪ್ರಮುಖರು ಒತ್ತಾಯಿಸಿದರು. ತಕ್ಷಣ ಅರಣ್ಯ ಸಚಿವ ರಮಾನಾಥ ರೈ ಅವರು ಜಿಲ್ಲೆಗೆ ಭೇಟಿ ನೀಡಿ ಕಾಡಾನೆ ಹಾವಳಿಯಿಂದ ನೊಂದವರಿಗೆ ಸಾಂತ್ವನ ಹೇಳಬೇಕೆಂದು ಲಿಯಾಕತ್ ಆಲಿ ಆಗ್ರಹಿಸಿದರು.
ಈ ಸಂದರ್ಭ ಪ್ರಮುಖರಾದ ಅಬ್ದುಲ್ ಅಡ್ಕಾರ್, ನೂರುದ್ದೀನ್, ಇಬ್ರಾಹೀಂ ಮತ್ತಿತರರು ಉಪಸ್ಥಿತರಿದ್ದರು.







