ಬುಡಕಟ್ಟು ಜನರ ಕಡೆಗಣನೆ: ನಾಳೆಯಿಂದ ಐಟಿಡಿಪಿ ಕಚೇರಿ ಎದುರು ಅಹೋರಾತ್ರಿ ಪ್ರತಿಭಟನೆ
ಮಡಿಕೇರಿ, ಮಾ.26: ಅನಾದಿಕಾಲದಿಂದ ಅರಣ್ಯದಲ್ಲಿ ವಾಸಿಸುತ್ತಿರುವ ಬುಡಕಟ್ಟು ಜನರ ಕಡೆಗಣನೆಯನ್ನು ಖಂಡಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ಒಕ್ಕೂಟ, ಬುಡಕಟ್ಟು ಮಹಿಳಾ ಸಂಘಟನೆ ಹಾಗೂ ಬುಡಕಟ್ಟು ಕೃಷಿಕರ ಸಂಘ ಮಾ.28ರಿಂದ ಮಾಡು ಅಥವಾ ಮಡಿ ಸಂಕಲ್ಪದೊಂದಿಗೆ ಅಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭಿಸಲು ಮುಂದಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಸಂಚಾಲಕ ತಮ್ಮಯ್ಯ, ಕೊಡಗಿನಲ್ಲಿ ವಾಸಿಸುತ್ತಿರುವ ಆದಿವಾಸಿಗಳನ್ನು ಇಂದಿನ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ನಿರ್ಲಕ್ಷಿಸಿದ್ದು, ಅಸಹಾಯಕ ಸ್ಥಿತಿಯಲ್ಲಿರುವ ಆದಿವಾಸಿಗಳು ಸೋಮವಾರದಿಂದ ಐಟಿಡಿಪಿ ಇಲಾಖಾ ಕಚೇರಿಯ ಎದುರು ನಿರಂತರ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಿದ್ದಾರೆ ಎಂದು ತಿಳಿಸಿದರು.
ಆದಿವಾಸಿಗಳ ಮಕ್ಕಳ ಶಿಕ್ಷಣಕ್ಕಾಗಿ ಸರಕಾರ ಆಶ್ರಮ ಶಾಲೆಗಳನ್ನು ನಿರ್ಮಿಸಿದೆಯಾದರೂ ಮೂಲ ಸೌಕರ್ಯಗಳಿಲ್ಲದೆ ನಲುಗುತ್ತಿವೆ. ಗುಣಮಟ್ಟದ ಶಿಕ್ಷಣ ವ್ಯವಸ್ಥೆ ಇಲ್ಲದೆ ಮಕ್ಕಳು ಕೂಲಿಯಾಳುಗಳಾಗಿ ಪರಿವರ್ತನೆಯಾಗುತ್ತಿದ್ದಾರೆ. ಯುವತಿಯರು ಮತ್ತು ಮಹಿಳೆಯರು ರಕ್ತ ಹೀನತೆಯಿಂದ ಬಳಲುತ್ತಿದ್ದು, ಗರ್ಭಿಣಿಯರು ಹಾಗೂ ಬಾಣಂತಿಯರು ಸಾವಿಗೀಡಾಗುತ್ತಿದ್ದಾರೆ. ಸಾಂಕ್ರಾಮಿಕ ರೋಗಗಳಿಂದಲೂ ಮಕ್ಕಳು ಅಸುನೀಗುತ್ತಿದ್ದು, ಗಿರಿಜನರ ಜನಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ ಎಂದು ತಮ್ಮಯ್ಯ ಆತಂಕ ವ್ಯಕ್ತಪಡಿಸಿದರು. ಒಕ್ಕೂಟದ ಪದಾಧಿಕಾರಿ ಪಣಿ ಎರವರ ಗಪ್ಪುಮಾತನಾಡಿ, ಹೊರಗಿನಿಂದ ವಲಸೆ ಬಂದವರಿಗೆ ಭೂಮಿಯ ಹಕ್ಕನ್ನು ನೀಡಲಾಗುತ್ತಿದ್ದು, ಕೊಡಗಿನ ಮೂಲ ನಿವಾಸಿಗಳಾದ ಬುಡಕಟ್ಟು ಜನರಿಗೆ ಭೂಮಿಯ ಹಕ್ಕು ಯಾಕೆ ಇಲ್ಲವೆಂದು ಪ್ರಶ್ನಿಸಿದರು. ತಲಾ 3 ಎಕರೆ ಭೂಮಿ ನೀಡುವಂತೆ ಒತ್ತಾಯಿಸಿದ ಅವರು, ಗಿರಿಜನರನ್ನು ಜೀತ ಮುಕ್ತರನ್ನಾಗಿ ಮಾಡಬೇಕೆಂದು ಆಗ್ರಹಿಸಿದರು.
ಮಹಿಳಾ ಸಂಘಟನೆಯ ಅಧ್ಯಕ್ಷೆ ಪ್ರೇಮಾ ಮಾತನಾಡಿ, ಅಭಯಾರಣ್ಯದಲ್ಲಿ ವಾಸಿಸುತ್ತಿರುವ ಬಡಕುಟುಂಬಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಬೇಕು, ಅರಣ್ಯ ಹಕ್ಕು ಕಾಯ್ದೆಯಡಿ ಅರ್ಹ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡಬೇಕು ಸೇರಿದಂತೆ ಅನೇಕ ಬೇಡಿಕೆಗಳನ್ನು ಮುಂದಿಟ್ಟು ಸೋಮವಾರದಿಂದ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿರುವುದಾಗಿ ತಮ್ಮಯ್ಯ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿ ಶೈಲೇಂದ್ರ, ಪ್ರಮುಖರಾದ ಟಿ.ಕೆ. ರವಿ ಹಾಗೂ ಮಾದೇವಿ ಉಪಸ್ಥಿತರಿದ್ದರು.







