ಹಳೆ ಸಿದ್ದಾಪುರ ಕಾಫಿ ತೋಟದಲ್ಲಿ ಕಾಡಾನೆಗಳ ಹಿಂಡು
ಮುಂದುವರಿದ ಆನೆ ಓಡಿಸುವ ಕಾರ್ಯಾಚರಣೆ
ಸಿದ್ದಾಪುರ, ಮಾ.26: ಸಮೀಪದ ಹಳೆ ಸಿದ್ದಾಪುರ ಕಾಫಿ ತೋಟದಲ್ಲಿ ಬೀಡು ಬಿಟ್ಟಿರುವ 9 ಕಾಡಾನೆಗಳ ಹಿಂಡನ್ನು ಓಡಿಸುವ ಕಾರ್ಯಾಚರಣೆ ಶನಿವಾರ ಬೆಳಗ್ಗಿನಿಂದ ಪ್ರಾರಂಭವಾಯಿತು. ಜಿಲ್ಲೆಯ ಅರಣ್ಯ ಇಲಾಖೆಯ ಕಳೆದ ಎರಡು ದಿನಗಳ ಸತತ ಪ್ರಯತ್ನದಿಂದಾಗಿ ಚೆಟ್ಟಳ್ಳಿ ಸಮೀಪ ಎರಡು ಪುಂಡಾನೆಗಳನ್ನು ಸೆರೆ ಹಿಡಿಯಲಾಗಿತ್ತು.
ಹಳೆ ಸಿದ್ದಾಪುರ ಕಾಫಿ ತೋಟದಲ್ಲಿ ಕಾಡಾನೆಗಳ ಹಿಂಡು ಗೋಚರಿಸಿದ ಹಿನ್ನಲೆಯಲ್ಲಿ ಕಾರ್ಮಿಕರು ಕೆಲಸ ಸ್ಥಗಿತಗೊಳಿಸಿದರು. ಕಾಫಿ ತೋಟದ ಸಮೀಪದಲ್ಲಿಯೇ ಇರುವ ಶಾಲೆಯ ವಿದ್ಯಾರ್ಥಿಗಳು ಶಾಲೆಯಿಂದ ಹೊರ ಬಾರದಂತೆ ಸೂಚಿಸಿದ ಬಳಿಕ ಅರಣ್ಯ ಇಲಾಖೆಯ ಜೀಪಿನಲ್ಲಿ ಗನ್‌ಮ್ಯಾನ್ ಸಹಾಯದೊಂದಿಗೆ ಮಕ್ಕಳನ್ನು ಮನೆಗೆ ಕಳಿಸಲಾಯಿತು.
ಚೆಟ್ಟಳ್ಳಿ ಸಮೀಪದ ಭೂತನಕಾಡು ಕಾರಕೊಲ್ಲಿ ಕಾಫಿ ತೋಟದಲ್ಲಿ ಬೀಡು ಬಿಟ್ಟಿದ್ದ ಕಾಡಾನೆಗಳು ಕಾವೇರಿ ನದಿ ದಾಟಿ ಹಳೆ ಸಿದ್ದಾಪುರ ಕಾಫಿ ತೋಟಕ್ಕೆ ಪ್ರವೇಶಿಸಿದ್ದು, ಕಾಡಾನೆಗಳ ಹಿಂಡಿನೊಂದಿಗೆ 2 ಮರಿಯಾನೆಗಳು ಸೇರಿಕೊಂಡಿವೆೆ ಎಂದು ಅರಣ್ಯ ಅಧಿಕಾರಿಗಳು ಮಾಹಿತಿ ನೀಡಿದರು.
ಉಪ ವಲಯ ಅರಣ್ಯಾಧಿಕಾರಿ ದೇವಯ್ಯ ನೇತೃತ್ವದಲ್ಲಿ ಗಣೇಶ್ ಕುಮಾರ್ ಹಾಗೂ ಆರ್‌ಆರ್‌ಟಿ (ರಾಪಿಡ್ ರೆಸ್ಪೋನ್ಸಿಬಲ್ ಟೀಂ) ತಂಡ ಆನೆ ಓಡಿಸುವ ಕಾರ್ಯಾಚರಣೆ ಮುಂದುವರಿಸಿದೆ.





