ಬಿಹಾರ: ಮಾವೊವಾದಿಗಳಿಂದ 14 ವಾಹನಗಳಿಗೆ ಬೆಂಕಿ
ಮುಝಫ್ಫರ್‌ಪುರ, ಮಾ.26: ಬಿಹಾರದ ಮುಝಫ್ಫರ್‌ಪುರ ಜಿಲ್ಲೆಯ ತುರ್ಕಿ ರೈಲ್ವೆ ನಿಲ್ದಾಣದ ಸಮೀಪ ಹಳಿ ದ್ವಿಗುಣ ಕಾಮಗಾರಿ ನಡೆಸುತ್ತಿದ್ದ ನಿರ್ಮಾಣ ಸಂಸ್ಥೆಯೊಂದರ 14 ವಾಹನಗಳು ಹಾಗೂ ಉಪಕರಣಗಳನ್ನು ಮಾವೊವಾದಿಗಳು ಸುಟ್ಟಿದ್ದಾರೆಂದು ಪೊಲೀಸ್ ಅಧಿಕಾರಿಗಳಿಂದು ತಿಳಿಸಿದ್ದಾರೆ.
ಸುಮಾರು 50 ಮಂದಿ ನಕ್ಸಲರ ಗುಂಪೊಂದು, ಮುಝಫ್ಫರ್ ನಗರದಿಂದ 10 ಕಿ.ಮೀ. ದೂರವಿರುವ ತುರ್ಕಿ ರೈಲು ನಿಲ್ದಾಣದ ಸಮೀಪದಲ್ಲಿದ್ದ ಮೆ. ಹರಿಕನ್‌ಸ್ಟ್ರಕ್ಷನ್ ಕಂಪೆನಿಯ ಯೋಜನಾ ಕಚೇರಿಗೆ ನಿನ್ನೆ ಮಧ್ಯರಾತ್ರಿಯ ಬಳಿಕ 2 ಗಂಟೆಯ ಸುಮಾರಿಗೆ ನುಗ್ಗಿ 14 ವಾಹನಗಳು ಹಾಗೂ ಉಪಕರಣಗಳಿಗೆ ಬೆಂಕಿ ಹಚ್ಚಿತ್ತೆಂದು ಹಿರಿಯ ಪೊಲೀಸ್ ಅಧೀಕ್ಷಕ ರಣಜಿತ್‌ಕುಮಾರ್ ಮಿಶ್ರಾ ಹೇಳಿದ್ದಾರೆ.
ದುಷ್ಕರ್ಮಿಗಳು ಕಂಪೆನಿಯ ಮೂವರು ಭದ್ರತಾ ಸಿಬ್ಬಂದಿಯ ಮೇಲೆ ಹಲ್ಲೆಯನ್ನೂ ನಡೆಸಿದ್ದಾರೆಂದು ಅವರು ತಿಳಿಸಿದ್ದಾರೆ. ಕಂಪೆನಿಯು ನಕ್ಸಲರಿಗೆ ‘ಲೆವಿ’ ನೀಡದ ಕಾರಣ ಈ ಕೃತ್ಯ ಎಸಗಿದ್ದಾರೆಂದು ಮಿಶ್ರಾ ಹೇಳಿದ್ದಾರೆ. ಈ ಸಂಬಂಧ ಪ್ರಕರಣವೊಂದನ್ನು ದಾಖಲಿಸಲಾಗಿದ್ದು, ದುಷ್ಕರ್ಮಿಗಳ ಬಂಧನಕ್ಕಾಗಿ ದಾಳಿಗಳನ್ನು ನಡೆಸಲಾಗುತ್ತಿದೆ. ಕಂಪೆನಿಗೆ ಭದ್ರತೆ ನೀಡುವುದಕ್ಕಾಗಿ ಪೊಲೀಸ್ ತುಕಡಿಯೊಂದು ಧಾವಿಸಿದೆಯೆಂದು ಅವರು ತಿಳಿಸಿದ್ದಾರೆ.





