ಗುಜರಾತ್: 2011-12ರಲ್ಲಿ 61 ಲಾಕಪ್‌ಡೆತ್
ಅಹ್ಮದಾಬಾದ್, ಮಾ.26: ಗುಜರಾತ್‌ನಲ್ಲಿ 2011-12ರಲ್ಲಿ 61 ಕಸ್ಟಡಿ ಸಾವುಗಳು ಸಂಭವಿಸಿವೆ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗ ವಿಧಾನಸಭೆಗೆ ವರದಿ ಸಲ್ಲಿಸಿದೆ.
ಪೊಲೀಸ್ ಕಸ್ಟಡಿ ಅಥವಾ ನ್ಯಾಯಾಂಗ ಬಂಧನದ ಅವಧಿಯಲ್ಲಿ ಸಂಭವಿಸಿದ ಒಟ್ಟು 51 ಸಾವುಗಳು ಸಹಜ ಸಾವಿನ ಪ್ರಕರಣಗಳು. ಏಳು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದರೆ, ಅಸಹಜ ಅಥವಾ ಸಂಶಯಾಸ್ಪದವಾಗಿ ಸಾವಿಗೀಡಾಗಿರುವ ಪ್ರಕರಣಗಳು ಮೂರು ಎಂದು ಗುಜರಾತ್ ರಾಜ್ಯ ಮಾನವ ಹಕ್ಕುಗಳ ಆಯೋಗ 2011-12ರ ಅವಧಿಗೆ ಸಲ್ಲಿಸಿದ ವರದಿಯನ್ನು ವಿಧಾನಸಭೆಯಲ್ಲಿ ಮಂಡಿಸಲಾಯಿತು.
8 ಸಾವುಗಳು ಪೊಲೀಸ್ ಕಸ್ಟಡಿಯಲ್ಲಿ ಸಂಭವಿಸಿದ್ದರೆ, 53 ಸಾವುಗಳು ನ್ಯಾಯಾಂಗ ಬಂಧನದ ಅವಧಿಯಲ್ಲಿ ಸಂಭವಿಸಿವೆ. ಅಹ್ಮದಾಬಾದ್ ನಗರದಲ್ಲೇ 24 ಸಾವುಗಳು ಸಂಭವಿಸಿವೆ. ಪ್ರತಿ 24ರಲ್ಲಿ ಒಂದು ಸಾವು ಅಸಹಜ ಸಾವು ಆಗಿದೆ. ವಡೋದರ ನಗರದಲ್ಲಿ 10 ಕಸ್ಟಡಿ ಸಾವುಗಳು ಸಂಭವಿಸಿದ್ದು, ಇಲ್ಲಿ ಯಾವುದೇ ಅಸಹಜ ಸಾವಿನ ಪ್ರಕರಣ ವರದಿಯಾಗಿಲ್ಲ. ಜುನಾಗಡ ನಗರದಲ್ಲಿ ನಾಲ್ಕು ಕಸ್ಟಡಿ ಸಾವು ಸಂಭವಿಸಿವೆ. ಅಹ್ಮದಾಬಾದ್ ಹೊರತುಪಡಿಸಿ, ರಾಜ್‌ಕೋಟ್ ಹಾಗೂ ದಹೋದ್ ನಗರಗಳ ಪೊಲೀಸ್ ಕಸ್ಟಡಿಯಲ್ಲಿ ಇತರ ಎರಡು ಅಸಹಜ ಸಾವು ಸಂಭವಿಸಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.
ಅಹ್ಮದಾಬಾದ್ ಗ್ರಾಮೀಣ, ಮಹಸನ, ರಾಜಕೋಟ್ ಗ್ರಾಮೀಣ, ಜುನಾಗಡ, ಅರ್ಮೇಲಿ, ವಲ್ಸದ್ ಹಾಗೂ ನವಸಾರಿ ಜಿಲ್ಲೆಗಳಲ್ಲಿ ತಲಾ ಒಂದು ಕಸ್ಟಡಿ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ. ಇಂಥ ಸಂಶಯಾಸ್ಪದ ಸಾವುಗಳ ಬಗ್ಗೆ ಆಯೋಗ ಯಾವ ಕ್ರಮ ಕೈಗೊಂಡಿದೆ ಎಂಬ ಉಲ್ಲೇಖ ವರದಿಯಲ್ಲಿಲ್ಲ.
2011-12ರಲ್ಲಿ ಮಾನವಹಕ್ಕುಗಳ ಆಯೋಗದ ಮಧ್ಯಪ್ರವೇಶಕ್ಕೆ ಕೋರಿ 2,989 ಅರ್ಜಿಗಳು ಸಲ್ಲಿಕೆಯಾಗಿವೆ. ಹಿಂದಿನ ಎರಡು ವರ್ಷಗಳಲ್ಲಿ ಇದು ಕ್ರಮವಾಗಿ 3,077 ಮತ್ತು 2,992 ಇತ್ತು. ಹಲವು ಪ್ರಕರಣಗಳಲ್ಲಿ ಆಯೋಗದ ಮಧ್ಯಪ್ರವೇಶದ ಬಳಿಕ ಅರ್ಜಿದಾರರ ಪರವಾಗಿ ಅಧಿಕಾರಿಗಳು ಅವರ ಸಮಸ್ಯೆ ಬಗೆಹರಿಸಿದ್ದಾರೆ ಎಂದು ವರದಿ ಹೇಳಿಕೊಂಡಿದೆ.





