2030ರೊಳಗೆ ಭಾರತ ಶೇ.100 ಇಲೆಕ್ಟ್ರಿಕ್ ಕಾರುಗಳ ದೇಶ?

ಹೊಸದಿಲ್ಲಿ, ಮಾ.26: ಯಾವುದೇ ಡೌನ್ ಪೇಮೆಂಟ್ ಇಲ್ಲದೆಯೇ ಜನರಿಗೆ ಇಲೆಕ್ಟ್ರಿಕ್ ಕಾರುಗಳನ್ನು ಒದಗಿಸುವ ಯೋಜನೆಯನ್ನು ರೂಪಿಸುವ ಬಗ್ಗೆ ಸರಕಾರ ಯೋಚಿಸುತ್ತಿದ್ದು, ದುಬಾರಿ ಇಂಧನ ಖರೀದಿಸುವ ಅಗತ್ಯವಿಲ್ಲದೇ ಇರುವುದರಿಂದ ಈ ನಿಟ್ಟಿನಲ್ಲಿ ಆಗುವ ಉಳಿತಾಯವನ್ನು ಜನರು ಕಾರಿಗಾಗಿ ವಿನಿಯೋಗಿಸಿ ದೇಶವನ್ನು 2030ರ ಹೊತ್ತಿಗೆ ನೂರು ಪ್ರತಿಶತ ಇಲೆಕ್ಟ್ರಿಕ್ ವಾಹನಗಳ ದೇಶವನ್ನಾಗಿಸಬಹುದೆಂಬ ದೂರಾಲೋಚನೆ ಸರಕಾರಕ್ಕಿದೆ.
ಸಿಐಐ ಯಂಗ್ ಇಂಡಿಯಾ ಆಯೋಜಿಸಿದ್ದ ಸಮಾರಂಭವೊಂದರಲ್ಲಿ ಮಾತನಾಡಿದ ಇಂಧನ ಸಚಿವ ಪಿಯುಶ್ ಗೋಯೆಲ್ ‘‘ಭಾರತಕ್ಕೆ ಸಂಪೂರ್ಣ ವಾಗಿ ಇಲೆಕ್ಟ್ರಿಕ್ ವಾಹನಗಳನ್ನು ಹೊಂದಿರುವ ಪ್ರಥಮ ದೇಶವಾಗುವ ಅವಕಾಶವಿದೆ. ಇದಕ್ಕಾಗಿ ನಮಗೆ ಸರಕಾರದಿಂದ ಯಾ ಜನರಿಂದ ಒಂದೇ ಒಂದು ರೂಪಾಯಿಯ ಅಗತ್ಯವೂ ಇಲ್ಲ’’ ಎಂದರು.
ಮುಂದುವರಿದು ಮಾತನಾಡಿದ ಅವರು ‘‘ನಾವು ಈ ಯೋಜನೆಯ ಬಗ್ಗೆ ಗಂಭೀರವಾಗಿ ಯೋಚಿಸುತ್ತಿದ್ದೇವೆ. ಇಂತಹ ಹೊಸ ಚಿಂತನೆಯ ಯೋಜನೆ ಸಾಧ್ಯವಿದೆ. ಅದಕ್ಕೆ ತೆರೆದ ಮನಸ್ಸು ಬೇಕಷ್ಟೇ’’ ಎಂದರು.
ಈ ನಿಟ್ಟಿನಲ್ಲಿ ಕಾರ್ಯಯೋಜನೆ ರೂಪಿಸಲು ಸಾರಿಗೆ ಸಚಿವ ನಿತಿನ್ ಗಡ್ಕರಿಯವರ ನೇತೃತ್ವದಲ್ಲಿ ಸಣ್ಣ ತಂಡವೊಂದನ್ನು ರಚಿಸಲಾಗಿದ್ದು ಈ ತಂಡದಲ್ಲಿ ತೈಲ ಸಚಿವ ಧರ್ಮೇಂದ್ರ ಪ್ರಧಾನ್ ಹಾಗೂ ಪರಿಸರ ಸಚಿವ ಪ್ರಕಾಶ್ ಜಾವೇಡ್‌ಕರ್ ಕೂಡ ಇದ್ದಾರೆಂದು ಹೇಳಿದರು. ಈ ತಂಡವು ಎಪ್ರಿಲ್ ಮೊದಲ ವಾರದಲ್ಲಿ ಸಭೆ ಸೇರಲಿದೆ. ನಾವು ವಿಶ್ವದ ಇತರ ರಾಷ್ಟ್ರಗಳನ್ನು ಹಿಂಬಾಲಿಸುವ ಬದಲು ವಿಶ್ವಕ್ಕೆ ಹೊಸ ದಿಕ್ಕು ತೋರಿಸಬೇಕೆಂದಿದ್ದೇವೆ’’ ಎಂದರು.
ಡೊಮೆಸ್ಟಿಕ್ ಎಫೀಶಿಯಂಟ್ ಲೈಟಿಂಗ್ ಪ್ರೋಗ್ರಾಂ ಅನ್ವಯ ಸರಕಾರ ಇಲ್ಲಿಯ ತನಕ ವಿದ್ಯುತ್ ಬಳಕೆದಾರರಿಗೆ 8.32 ಕೋಟಿ ಎಲ್‌ಇಡಿ ಬಲ್ಬುಗಳನ್ನು ಪ್ರತಿ ಬಲ್ಬಿಗೆ ರೂ.10ರಂತೆ ವಿತರಿಸಿದೆಯೆಂದು ಸಚಿವರು ಮಾಹಿತಿ ನೀಡಿದರು.





