ಎನ್‌ಐಎ ನನ್ನ ಹೇಳಿಕೆಯನ್ನು ನನ್ನದೇ ಶಬ್ದಗಳಲ್ಲಿ ದಾಖಲಿಸಿಕೊಂಡಿಲ್ಲ: ಹೆಡ್ಲಿ ಆರೋಪ

ಮುಂಬೈ, ಮಾ.26: ರಾಷ್ಟ್ರೀಯ ತನಿಖೆ ದಳವು 26/11 ಮುಂಬೈ ಭಯೋತ್ಪಾದಕ ದಾಳಿಯ ಕುರಿತು ತನ್ನ ಹೇಳಿಕೆಯನ್ನು ತನ್ನದೇ ಶಬ್ದಗಳಲ್ಲಿ ದಾಖಲಿಸಿಕೊಂಡಿಲ್ಲ ಹಾಗೂ ಅದನ್ನು ತನಗೆ ಓದಿ ಹೇಳಿಲ್ಲವೆಂದು ಭಯೋತ್ಪಾದಕ ಡೇವಿಡ್ ಕೋಲ್ಮನ್ ಹೆಡ್ಲಿ ಆರೋಪಿಸಿದ್ದಾನೆ.
ಹೆಡ್ಲಿ, ಪಾಕಿಸ್ತಾನದ ಮಾಜಿ ಅಧ್ಯಕ್ಷ ಫರ್ವೇಜ್ ಮುಶರ್ರಫ್‌ರ ಹತ್ಯೆಗೆ ಸಂಚು ರೂಪಿಸಿದ್ದನೆನ್ನುವುದನ್ನು ನಿರಾಕರಿಸಿದ್ದಾನೆ. ತಾನು ಆ ರೀತಿ ಹೇಳಿದ್ದೇನೆಂಬುದಾಗಿ ಎನ್‌ಐಎ ಯಾಕೆ ಪ್ರತಿಪಾದಿಸಿದೆಯೆಂದು ತನಗೆ ತಿಳಿದಿಲ್ಲವೆಂದ ಹೆಡ್ಲಿ, ತನಿಖೆ ಸಂಸ್ಥೆಗೆ ತಾನು ಈ ಹಿಂದೆ ನೀಡಿದ್ದ ಹೇಳಿಕೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನೆತ್ತಿದ್ದಾನೆ.
ಇಶ್ರತ್ ಜಹಾನ್ ಹಾಗೂ ಗುಜರಾತ್‌ನ ಅಕ್ಷರಧಾಮ ದೇವಾಲಯದ ದಾಳಿಯ ಬಗ್ಗೆ ತನಗೆ ಮೊದಲೇ ಮಾಹಿತಿಯಿರಲಿಲ್ಲ. ಲಷ್ಕರ್ ಮುಖ್ಯಸ್ಥ ಝಕಿಉರ್ರಹ್ಮಾನ್ ಲಖ್ವಿ ತನಗೆ ಮುಝಮ್ಮಿಲ್ ಭಟ್‌ನ ಭೇಟಿ ಮಾಡಿಸಿದ ಬಳಿಕ ಈ ಎರಡೂ ವಿಷಯಗಳ ಬಗ್ಗೆ ತನಗೆ ತಿಳಿಯಿತೆಂದು ಪಾಕಿಸ್ತಾನಿ-ಅಮೆರಿಕನ್ ಭಯೋತ್ಪಾದಕ ಇಂದು ನ್ಯಾಯಾಲಯಕ್ಕೆ ತಿಳಿಸಿದ್ದಾನೆ.
2004ರಲ್ಲಿ ಗುಜರಾತ್‌ನಲ್ಲಿ ಎನ್‌ಕೌಂಟರ್‌ಗೆ ಬಲಿ ಯಾಗಿದ್ದ 19ರ ಹರೆಯದ ಇಶ್ರತ್ ಜಹಾನ್, ಪಾಕಿಸ್ತಾನ ಮೂಲದ ಲಷ್ಕರೆ ತಯ್ಯಬ ಭಯೋತ್ಪಾದನೆ ಸಂಘಟನೆಯ ಸದಸ್ಯೆಯಾಗಿದ್ದಳೆಂದು ಫೆಬ್ರವರಿಯಲ್ಲಾತ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದನು.
ಎನ್‌ಐಎ ತನ್ನ ಹೇಳಿಕೆಯನ್ನು ತಾನು ಹೇಳಿದುದಕ್ಕೆ ಭಿನ್ನವಾದ ಶಬ್ದಗಳಲ್ಲಿ ದಾಖಲಿಸಿಕೊಂಡಿದೆ. ಉದಾಹರಣೆಗೆ, ಲಖ್ವಿ ತನ್ನನ್ನು ಭಟ್‌ಗೆ ಪರಿಚಯಿಸಿದಾಗ, ಆತ ಭಟ್‌ನನ್ನು, ಪ್ರತಿ ಮಹತ್ವದ ಕಾರ್ಯಾಚರಣೆ ವಿಫಲ ಗೊಂಡಿರುವ ಉನ್ನತ ಕಮಾಂಡರ್ ಎಂದು ಉಲ್ಲೇ ಖಿಸಿದ್ದನೆಂದು ತಾನೆಂದೂ ಹೇಳಿಲ್ಲವೆಂದು ಹೆಡ್ಲಿ ಆರೋಪಿಸಿದ್ದಾನೆ.
ಎನ್‌ಐಎ ತನ್ನ ಹೇಳಿಕೆ ಯನ್ನು ಅದೇ ಶಬ್ದಗಳಲ್ಲಿ ಯಾಕೆ ದಾಖಲಿಸಿಕೊಂಡಿಲ್ಲ ವೆಂದು ತಾನು ವಿವರಿಸಲಾರೆ. ದಾಖಲಿಸಿದ ಬಳಿಕ ಅವರು ತನಗೆ ಅದನ್ನು ಓದಿ ಹೇಳಿಲ್ಲ. ತಾನು ಅದರ ಪ್ರತಿಯನ್ನೂ ಕೇಳಿಲ್ಲ. ಅವರೂ ಅದನ್ನು ನೀಡಿಲ್ಲವೆಂದು ಆತ ತಿಳಿಸಿದ್ದಾನೆ.
ಹೆಡ್ಲಿಗೆ ಆತನ ಹೇಳಿಕೆಯ ಪ್ರತಿಯೊಂದನ್ನು ತೋರಿಸಿದಾಗ, ಅದನ್ನು ತಾನು ಮೊದಲ ಬಾರಿಗೆ ನೋಡುತ್ತಿದ್ದೇನೆಂದು ಹೇಳಿದ್ದಾನೆ. ಆದರೆ ತಾನು, ಅಬೂಐಮನ್‌ನ ತಾಯಿಯ ನೇತೃತ್ವದ ಎಲ್‌ಇಟಿಯ ಮಹಿಳಾ ಘಟಕದ ಬಗ್ಗೆ ಎನ್‌ಐಗೆ ತಿಳಿಸಿದ್ದೇನೆಂಬುದನ್ನು ಹೆಡ್ಲಿ ಒಪ್ಪಿಕೊಂಡಿದ್ದಾನೆ.







