ಮುಂದುವರಿದ ಆಭರಣ ವ್ಯಾಪಾರಿಗಳ ಮುಷ್ಕರ
ಹೊಸದಿಲ್ಲಿ, ಮಾ.26: ದೇಶದ ಅನೇಕ ಭಾಗಗಳ ಚಿನ್ನ ಮತ್ತು ಆಭರಣಗಳ ಅಂಗಡಿಗಳು ಸತತ 25ನೆ ದಿನ ಶನಿವಾರವೂ ಮುಚ್ಚಿದ್ದವು. ಬೆಳ್ಳಗೆ ಹೊರತಾದ ಆಭರಣಗಳ ಮೇಲೆ ಶೇ.1ರಷ್ಟು ಅಬಕಾರಿ ತೆರಿಗೆ ವಿಧಿಸುವ ಬಜೆಟ್ ಪ್ರಸ್ತಾಪವನ್ನು ವಿರೋಧಿಸಿ ವ್ಯಾಪಾರಿಗಳು ಚಿನ್ನದಂಗಡಿ ಬಂದ್ ನಡೆಸುತ್ತಿದ್ದಾರೆ. ಈ ನಡುವೆ ಚಿನ್ನದ ವ್ಯಾಪಾರಿಗಳ ಬೇಡಿಕೆಯನ್ನು ಪರಿಶೀಲಿಸಲು ಸರಕಾರವು ಸಮಿತಿಯೊಂದನ್ನು ರಚಿಸಿದೆ.
ದಿಲ್ಲಿ ಹಾಗೂ ಕೋಲ್ಕತಾ ಸಹಿತ ದೇಶದ ಹಲವು ಭಾಗಗಳು ಚಿನ್ನಾಭರಣದ ವ್ಯಾಪಾರಿಗಳು ಇಂದು ಅಂಗಡಿಗಳನ್ನು ಮುಚ್ಚಿದ್ದರು. ಆದಾಗ್ಯೂ, ತಮಿಳುನಾಡಿನ ಹೆಚ್ಚಿನ ಅಂಗಡಿಗಳು ತೆರೆದಿದ್ದು ಮಾಮೂಲು ವ್ಯಾಪಾರ ನಡೆಸಿದ್ದಾರೆ.
ಅಖಿಲ ಭಾರತ ಚಿನ್ನ, ಆಭರಣ ಸ್ವರ್ಣಕಾರರ ಒಕ್ಕೂಟ(ಎಐಬಿಜೆಎಸ್‌ಎಫ್) ಮಾ.17ರಂದು ರಾಮಲೀಲಾ ಮೈದಾನದಲ್ಲಿ ಬೃಹತ್ ರ್ಯಾಲಿಯೊಂದನ್ನು ನಡೆಸಿದ್ದು, ಮುಷ್ಕರ ಮುಂದುವರಿಸಿದೆ. ಮೂರು ದೊಡ್ಡ ಸಂಘಟನೆಗಳಾದ ಜಿಜೆಎಫ್, ಎಬಿಜೆಎ ಹಾಗೂ ಜಿಜೆಇಪಿಸಿಗಳು, ‘ಇನ್‌ಸ್ಪೆಕ್ಟರ್ ರಾಜ್’ ಇರದೆಂಬ ಸರಕಾರದ ಆಶ್ವಾಸನೆಯ ಬಳಿಕ, ಕಳೆದ ಶನಿವಾರ ಮುಷ್ಕರ ಕೊನೆಗೊಳಿಸಿವೆ.
ಇದೇ ವೇಳೆ, ಸರಕಾರವು ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಅಶೋಕ್ ಲಾಹ್ರಿ ನೇತೃತ್ವದಲ್ಲಿ, ಚಿನ್ನ ವ್ಯಾಪಾರಿಗಳ ಬೇಡಿಕೆಗಳನ್ನು ಪರಿಶೀಲಿಸಲು ಸಮಿತಿಯೊಂದನ್ನು ರಚಿಸಿದೆ. ಅದು 60 ದಿನಗಳಲ್ಲಿ ತನ್ನ ವರದಿ ಸಲ್ಲಿಸಲಿದೆ.





