ಶ್ರೀಜೇಶ್‌ಗೆ ವರ್ಷದ ಹಾಕಿ ಆಟಗಾರ ಪ್ರಶಸ್ತಿ

ಬೆಂಗಳೂರು, ಮಾ.26: ಬೆಂಗಳೂರಿನಲ್ಲಿ ಶನಿವಾರ ನಡೆದ ಹಾಕಿ ಇಂಡಿಯಾ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾರತದ ಗೋಲ್‌ಕೀಪರ್ ಪಿ.ಆರ್.ಶ್ರೀಜೇಶ್ ಪುರುಷರ ವಿಭಾಗದಲ್ಲಿ ವರ್ಷದ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಶನಿವಾರ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ದುೃವ ಬಾತ್ರಾ ವರ್ಷದ ಆಟಗಾರ ಪ್ರಶಸ್ತಿಗೆ ಭಾಜನರಾಗಿರುವ ಶ್ರೀಜೇಶ್ ಹಾಗೂ ದೀಪಿಕಾ ತಲಾ 25 ಲಕ್ಷ ರೂ ಹಾಗೂ ಟ್ರೋಫಿ ಸ್ವೀಕರಿಸಿದರು.
ದಿವಂಗತ ಹಾಕಿ ನಾಯಕ ಶಂಕರ್ ಲಕ್ಷ್ಮಣ್ ಮೇಜರ್ ಧ್ಯಾನ್‌ಚಂದ್ ಜೀವಮಾನ ಸಾಧನಾ ಪ್ರಶಸ್ತಿಗೆ ಆಯ್ಕೆಯಾಗಿದ್ದು, 30 ಲಕ್ಷ ರೂ. ನಗದು ಹಾಗೂ ಟ್ರೋಫಿ ನೀಡಲಾಯಿತು.
ಭಾರತದ ಪರ 100 ಪಂದ್ಯಗಳನ್ನು ಆಡಿರುವ ಧರ್ಮವೀರ್ ಸಿಂಗ್, ಕೊಥಜಿತ್ ಸಿಂಗ್, ಬಿರೇಂದ್ರ ಲಾಕ್ರ ಹಾಗೂ ಸುಶೀಲಾ ಚಾನು ಅವರಿಗೆ ಟ್ರೋಫಿ ಹಾಗೂ ತಲಾ 50,000 ರೂ. ನೀಡಿ ಗೌರವಿಸಲಾಯಿತು.
ಭಾರತದ ಪರ 200 ಪಂದ್ಯಗಳನ್ನು ಆಡಿರುವ ಗುರ್ಬಾಜ್ ಸಿಂಗ್ ಹಾಗೂ ವಿಆರ್ ರಘುನಾಥ್‌ಗೆ ತಲಾ 1 ಲಕ್ಷ ರೂ. ಹಾಗೂ ಟ್ರೋಫಿ ನೀಡಲಾಯಿತು. 36 ವರ್ಷಗಳ ಬಳಿಕ ರಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದು ಐತಿಹಾಸಿಕ ಸಾಧನೆ ಮಾಡಿರುವ ಭಾರತದ ಮಹಿಳಾ ಹಾಕಿ ತಂಡ ಹಾಗೂ ಸಹಾಯಕ ಸಿಬ್ಬಂದಿ ವರ್ಗಕ್ಕೆ ಸನ್ಮಾನ ಮಾಡಲಾಯಿತು.
ವರ್ಷದ ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿ(ಅಂಡರ್-21 ಮಹಿಳೆಯರು) ಹಾಗೂ ವರ್ಷದ ಉದಯೋನ್ಮುಖ ಆಟಗಾರ ಪ್ರಶಸ್ತಿಯನ್ನು(ಅಂಡರ್-21 ಪುರುಷರು) ಕ್ರಮವಾಗಿ ಪ್ರೀತಿ ದುಬೆ ಹಾಗೂ ಹರ್ಜೀತ್ ಸಿಂಗ್‌ಗೆ ಪ್ರದಾನಿಸಲಾಯಿತು.
ಹಾಕಿ ಇಂಡಿಯಾ ವರ್ಷದ ಆಟಗಾರ ಪ್ರಶಸ್ತಿಗೆ ತನ್ನನ್ನು ಆಯ್ಕೆ ಮಾಡಿರುವುದು ಮಹಾ ಗೌರವ. ನಾನು ಈ ಪ್ರಶಸ್ತಿಯನ್ನು ನನ್ನ ಎಲ್ಲ ಕೋಚ್‌ಗಳು, ಕುಟುಂಬ ಸದಸ್ಯರು ಹಾಗೂ ಪ್ರೋತ್ಸಾಹ ನೀಡಿದ ಸ್ನೇಹಿತರು-ಹಿತೈಷಿಗಳಿಗೆ ಸಮರ್ಪಿಸುವೆ. ಈ ಪ್ರಶಸ್ತಿಯು ನನಗೆ ಹಾಕಿಯಲ್ಲಿ ಮತ್ತಷ್ಟು ಸಾಧನೆ ಮಾಡಲು ಉತ್ತೇಜನ ನೀಡಿದೆ
ಪಿ.ಆರ್.ಶ್ರೀಜೇಶ್, ಭಾರತದ ಹಾಕಿ ಗೋಲ್‌ಕೀಪರ್.







