ಆಸ್ಟ್ರೇಲಿಯ ವಿರುದ್ಧದ ವಿಶ್ವಕಪ್ ಪಂದ್ಯ: ಭಾರತದ ಕೋರಿಕೆಯಂತೆ ಮೊಹಾಲಿ ಪಿಚ್‌ನಲ್ಲಿ ಬದಲಾವಣೆ!

ಮೊಹಾಲಿ, ಮಾ.27: ಆತಿಥೇಯ ಭಾರತಕ್ಕೆ ರವಿವಾರ ರಾತ್ರಿ ಇಲ್ಲಿ ನಡೆಯಲಿರುವ ಆಸ್ಟ್ರೇಲಿಯ ವಿರುದ್ಧದ ಸೂಪರ್-10 ಪಂದ್ಯವನ್ನು ಜಯಿಸಿದರೆ ಮಾತ್ರ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಸೆಮಿಫೈನಲ್‌ಗೆ ತೇರ್ಗಡೆಯಾಗಬಹುದು. ಇದಕ್ಕೆ ವಾಮಮಾರ್ಗವನ್ನು ಹುಡುಕಿರುವ ಬಿಸಿಸಿಐ ಮೊಹಾಲಿಯ ಪಿಚ್‌ನ್ನು ಭಾರತದ ಸ್ಪಿನ್ನರ್‌ಗಳಿಗೆ ನೆರವಾಗುವಂತೆ ಬದಲಿಸಲು ನಿರ್ಧರಿಸಿದೆ.
ಭಾರತೀಯ ಟೀಮ್ ಮ್ಯಾನೇಜ್‌ಮೆಂಟ್‌ನ ಕೋರಿಕೆಯ ಮೇರೆಗೆ ರವಿವಾರ ಮೊಹಾಲಿಯಲ್ಲಿ ನಡೆಯಲಿರುವ ಭಾರತ-ಆಸ್ಟ್ರೇಲಿಯ ನಡುವಿನ ಪಿಚ್‌ನ್ನು ಸ್ಪಿನ್ನರ್‌ಗಳ ಸ್ನೇಹಿಯಾಗಿ ಬದಲಿಸಲಾಗಿದೆ ಎಂದು ಬಿಸಿಸಿಐ ಖಚಿತಪಡಿಸಿದೆ.
ಪಾಕಿಸ್ತಾನ-ಆಸ್ಟ್ರೇಲಿಯ ಪಂದ್ಯಕ್ಕೆ ಬಳಸಲಾಗಿದ್ದ ಪಿಚ್‌ನಲ್ಲೇ ಪಂದ್ಯವನ್ನು ನಡೆಸಲು ನಿರ್ಧರಿಸಲಾಗಿತ್ತು. ಆದರೆ, ಈ ಬಗ್ಗೆ ಭಾರತ ಅಸಮಾಧಾನ ವ್ಯಕ್ತಪಡಿಸಿದೆ. ಇದೀಗ ಒತ್ತಾಯದ ಮೇರೆಗೆ ಪಿಚ್‌ನ್ನು ಬದಲಿಸಲಾಗಿದೆ. ಈಗಿನ ಹೊಸ ಪಿಚ್ ಸ್ಪಿನ್ನರ್‌ಗಳಿಗೆ ಹೆಚ್ಚು ನೆರವಾಗಲಿದ್ದು, ಅನಿಶ್ಚಿತ ಬೌನ್ಸ್ ಇರಲಿದೆ ಎಂದು ಬಿಸಿಸಿಐ ಅಧಿಕಾರಿಗಳು ತಿಳಿಸಿದ್ದಾರೆ.
ನಾಗ್ಪುರದಲ್ಲಿ ನ್ಯೂಝಿಲೆಂಡ್ ವಿರುದ್ಧ ನಡೆದ ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಭಾರತದ ಟೀಮ್ ಮ್ಯಾನೇಜ್‌ಮೆಂಟ್ ಒತ್ತಾಯದ ಮೇರೆಗೆ ಪಿಚ್‌ನ್ನು ಬದಲಿಸಲಾಗಿತ್ತು. ಆದರೆ, ಈ ಹೆಜ್ಜೆ ಭಾರತಕ್ಕೆ ತಿರುಗುಬಾಣವಾಗಿತ್ತು. ಆ ಪಂದ್ಯದಲ್ಲಿ ಕಿವೀಸ್‌ನ ಸ್ಪಿನ್ನರ್‌ಗಳಾದ ಮಿಚೆಲ್ ಸ್ಯಾಂಟ್ನರ್ ಹಾಗೂ ಐಶ್ ಸೋಧಿ ಭಾರತವನ್ನು ಇನ್ನಿಲ್ಲದಂತೆ ಕಾಡಿದ್ದರು.
ಐಸಿಸಿ ಟೂರ್ನಮೆಂಟ್‌ಗಳನ್ನು ಪಿಚ್‌ನ್ನು ಬದಲಿಸುವಂತಹ ಕೆಲಸಕ್ಕೆ ಕೈಹಾಕುತ್ತಿರುವುದು ಇದೇ ಮೊದಲು. ಪಿಚ್‌ನ್ನು ಐಸಿಸಿಯಿಂದ ನೇಮಕಮಾಡಿರುವ ಕ್ಯುರೇಟರ್‌ಗಳು ತಯಾರಿಗೊಳಿಸುತ್ತಾರೆ. ಆದರೆ, ಇಂದಿನ ದಿನಗಳಲ್ಲಿ ಪಂದ್ಯ ವಾಣೀಜ್ಯಕರಣಗೊಂಡಿದ್ದು, ಕೆಲವೇ ವ್ಯಕ್ತಿ-ಸಂಸ್ಥೆಗಳ ಹಿತದೃಷ್ಟಿಯೇ ಮುಖ್ಯವಾಗಿದೆ .







