ಉತ್ತರ ಕೊರಿಯಾ ಕ್ಷಿಪಣಿ ದಾಳಿಗೆ ವಾಷಿಂಗ್ಟನ್ ಸರ್ವನಾಶ!
ಅಮೆರಿಕ- ದಕ್ಷಿಣ ಕೊರಿಯಾ ಜಂಟಿ ಮಿಲಿಟರಿ ಅಭ್ಯಾಸಕ್ಕೆ ಪ್ಯೊಂಗ್ವಾಂಗ್ ವೀಡಿಯೊ ಪ್ರತಿಕ್ರಿಯೆ

ಉತ್ತರ ಕೊರಿಯಾ, ಮಾ.27: ಅಮೆರಿಕ ಹಾಗೂ ದಕ್ಷಿಣ ಕೊರಿಯಾದ ಜಂಟಿ ಮಿಲಿಟರಿ ಸಮರಾಭ್ಯಾಸಕ್ಕೆ ಉತ್ತರ ಕೊರಿಯಾದ ಮುಖಂಡ ಪ್ಯೊಂಗ್ವಾಂಗ್ ಕಿಡಿ ಕಾರಿದ್ದು, ವಾಷಿಂಗ್ಟನ್‌ನ ಮೇಲೆ ಉತ್ತರ ಕೊರಿಯಾ ಅಣ್ವಸ್ತ್ರ ದಾಳಿ ನಡೆಸುವ ವೀಡಿಯೊವನ್ನು ಉತ್ತರ ಕೊರಿಯಾ ಬಿಡುಗಡೆ ಮಾಡಿದೆ.
ಉತ್ತರ ಕೊರಿಯಾದ ಅಧಿಕೃತ ಮಾಧ್ಯಮದಲ್ಲಿ ‘ಲಾಸ್ಟ್ ಚಾನ್ಸ್’ ಶೀರ್ಷಿಕೆಯ ಈ ನಾಲ್ಕು ನಿಮಿಷಗಳ ವೀಡಿಯೊ ಬಿತ್ತರಿಸಲಾಗಿದ್ದು, ಉತ್ತರ ಕೊರಿಯಾದ ಸಬ್‌ಮೆರಿನ್‌ನಿಂದ ಸಿಡಿಸಿದ ಕ್ಷಿಪಣಿಯು ಅಮೆರಿಕದ ರಾಜಧಾನಿ ವಾಷಿಂಗ್ಟನ್ ನಗರವನ್ನು ಸರ್ವನಾಶ ಮಾಡುವ ಡಿಜಿಟಲ್ ಸೃಷ್ಟಿಯ ಚಿತ್ರಣವಿದೆ ಎಂದು ಸುದ್ದಿಸಂಸ್ಥೆ ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.
ಈ ಜಂಟಿ ಮಿಲಿಟರಿ ಕಾರ್ಯಾಚರಣೆಯಲ್ಲಿ ಶಿರಚ್ಛೇದನದ ತರಬೇತಿಯೂ ಸೇರಿದೆ ಎಂದು ದಕ್ಷಿಣ ಕೊರಿಯಾ ಪ್ರಕಟಿಸಿದ್ದರಿಂದ ವ್ಯಗ್ರರಾಗಿರುವ ಪ್ಯೊಂಗ್ವಾಂಗ್ ಈ ಕಾರ್ಯಾಚರಣೆ ದಾಳಿಗೆ ರಿಹರ್ಸಲ್ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉತ್ತರ ಕೊರಿಯಾದ ಸರ್ವೋಚ್ಚ ನಾಯಕ ಕಿಮ್ ಜಂಗ್ ಉನ್ ಶನಿವಾರ ಎಚ್ಚರಿಕೆ ನೀಡಿ, ತಮ್ಮ ಸೇನೆ ಸಿಯೋಲ್‌ನ ಅಧ್ಯಕ್ಷರ ಅರಮನೆ ಮೇಲೆ ದಾಳಿ ನಡೆಸಲು ಸನ್ನದ್ಧವಾಗಿದೆ. ದಕ್ಷಿಣ ಕೊರಿಯಾ ಅಧ್ಯಕ್ಷ ಪಾರ್ಕ್ ಜ್ಯೂನ್ ಹ್ಯೂ ಅಧಿಕಾರಿಗಳ ಮರಣದಂಡನೆಯ ವಿಶ್ವಾಸದ್ರೋಹಕ್ಕೆ ಕ್ಷಮೆ ಯಾಚಿಸದಿದ್ದರೆ, ದಾಳಿ ನಡೆಸುವುದು ಖಚಿತ ಎಂದು ಹೇಳಿದ್ದಾರೆ.
ದಕ್ಷಿಣ ಕೊರಿಯಾದ ಮೇಲೆ ದಾಳಿ ಮಾಡಬಹುದಾದ ಶಸ್ತ್ರಾಸ್ತ್ರಗಳು ಉತ್ತರ ಕೊರಿಯಾ ಬಳಿ ಇದ್ದರೂ, ಅಂಥ ದಾಳಿ ಅಸಂಭವ ಎಂದು ವಿಶ್ಲೇಷಕರು ಹೇಳುತ್ತಾರೆ. ಲಾಸ್ಟ್ ಚಾನ್ಸ್ ವೀಡಿಯೊವನ್ನೇ ಹೋಲುವ ವೀಡಿಯೊವನ್ನು 2013ರಲ್ಲಿ ಉತ್ತರ ಕೊರಿಯಾ ಅಣ್ವಸ್ತ್ರ ಪರೀಕ್ಷೆ ಮತ್ತು ಉಪಗ್ರಹ ಉಡಾವಣೆ ನಡೆಸಿದ ಸಂದರ್ಭದಲ್ಲೂ ಪ್ರಸಾರ ಮಾಡಲಾಗಿತ್ತು.





