ಧೋನಿ ಬಳಗಕ್ಕೆ ಹಾಕಿ ದಂತಕತೆ ಬಲ್ಬೀರ್ ಸಿಂಗ್ ಶುಭ ಹಾರೈಕೆ

ಚಂಡೀಗಢ, ಮಾ.27: ಆಸ್ಟ್ರೇಲಿಯ ವಿರುದ್ಧದ ನಿರ್ಣಾಯಕ ವಿಶ್ವಕಪ್ ಪಂದ್ಯಕ್ಕೆ ಮೊದಲು ಧೋನಿ ಬಳಗವನ್ನು ಓರ್ವ ವಿಶೇಷ ಅತಿಥಿ ಭೇಟಿಯಾಗಿ ಶುಭ ಹಾರೈಸಿದರು. ಅವರೇ ಹಾಕಿ ದಂತಕತೆ ಬಲ್ಬೀರ್ ಸಿಂಗ್ ಸೀನಿಯರ್.
ಭಾರತಕ್ಕೆ ಒಲಿಂಪಿಕ್ಸ್ ಕೂಟದಲ್ಲಿ ಮೂರು ಬಾರಿ ಚಿನ್ನದ ಪದಕವನ್ನು ಗೆದ್ದುಕೊಟ್ಟಿರುವ 92ರ ಹರೆಯದ ಬಲ್ಬೀರ್ ಸಿಂಗ್ ಶನಿವಾರ ಸಂಜೆ ಮೊಹಾಲಿಯ ಐಎಸ್ ಬಿಂದ್ರಾ ಪಿಸಿಎ ಸ್ಟೇಡಿಯಂಗೆ ಭೇಟಿ ನೀಡಿದರು. ಅಲ್ಲಿ ಅಭ್ಯಾಸ ನಿರತವಾಗಿದ್ದ ಧೋನಿ ಪಡೆಯನ್ನು ಭೇಟಿಯಾದರು.
1948 ರಿಂದ 1956ರ ಒಲಿಂಪಿಕ್ಸ್‌ನಲ್ಲಿ ಭಾರತ ಚಿನ್ನದ ಪದಕ ಜಯಿಸಲು ಪ್ರಮುಖ ಪಾತ್ರವಹಿಸಿದ್ದ ಬಲ್ಬೀರ್ ಸಿಂಗ್ ಅವರು ಧೋನಿ ಬಳಗದೊಂದಿಗೆ ಮಾತನಾಡಿ, ರವಿವಾರದ ಪಂದ್ಯದಲ್ಲಿ ಆಸ್ಟ್ರೇಲಿಯವನ್ನು ಮಣಿಸಿ ಎಂದು ಹಾರೈಸಿದರು.
ತಂಡದ ಪರವಾಗಿ ಸಿಂಗ್‌ಗೆ ಕೃತಜ್ಞತೆ ಸಲ್ಲಿಸಿದ ಧೋನಿ, ಅವರ ಆರೋಗ್ಯವನ್ನು ವಿಚಾರಿಸಿದರು. ಇದಕ್ಕೆ ನಗುತ್ತಾ ಉತ್ತರಿಸಿದ ಸಿಂಗ್, ನಿಮ್ಮ ಗೆಲುವು ನನ್ನ ಆರೋಗ್ಯವನ್ನು ಚೆನ್ನಾಗಿಡುತ್ತದೆ ಎಂದು ಹೇಳಿದರು. ‘‘ಭಾರತ ತಂಡ ಮೂರನೆ ಬಾರಿ ವಿಶ್ವಕಪ್ ಜಯಿಸಲಿ. ಆ ಮೂಲಕ ತನ್ನ ಹ್ಯಾಟ್ರಿಕ್ ಚಿನ್ನದ ಸಾಧನೆಯನ್ನು ಸರಿಗಟ್ಟಲಿ ಎಂದು ಹಾರೈಸಲು ಇಲ್ಲಿಗೆ ಬಂದಿದ್ದೇನೆ’’ಎಂದು ಸಿಂಗ್ ವರದಿಗಾರರಿಗೆ ತಿಳಿಸಿದರು.





