ಬ್ರಸೆಲ್ಸ್ ಭಯೋತ್ಪಾದಕ ದಾಳಿ: ಮುಸ್ಲಿಂ ಶಿಕ್ಷಕಿ ಬಲಿ, ಆತಂಕದಲ್ಲಿ ದೇಶದ ಮುಸಲ್ಮಾನರು

ಬ್ರಸೆಲ್ಸ್, ಮಾ.27: ಇಲ್ಲಿನ ಇಸ್ಲಾಮಿಕ್ ಶಾಲೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಿಕ್ಷಕಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟವರಲ್ಲಿ ಸೇರಿದ್ದಾರೆ.
ಮೂವರು ಮಕ್ಕಳ ತಾಯಿ, ಲೌಬ್ನಾ ಲಪ್‌ಕ್ವಿರಿ ಅವರ ನಿಧನಕ್ಕೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸಂತಾಪ ಸೂಚಿಸಿದ್ದಾರೆ. ದಾಳಿ ನಡೆದ ದಿನದಿಂದ, ಸದಾ ಮೆಟ್ರೊದಲ್ಲಿ ಪ್ರಯಾಣಿಸುತ್ತಿದ್ದ ಈ ಶಿಕ್ಷಕಿ ಕೆಲಸಕ್ಕೆ ಬಾರದೇ ಇದ್ದ ಕಾರಣ ಅವರು ಈ ಸುದ್ದಿಯ ಭೀತಿಯಲ್ಲಿದ್ದರು.
ಜವೆಂಟಮ್ ವಿಮಾನ ನಿಲ್ದಾಣ ಹಾಗೂ ಬೆಲ್ಜಿಯಂನ ರಾಜಧಾನಿಯಲ್ಲಿ ಮಿಯಾಲ್ಬಿಕ್ ಮೆಟ್ರೊ ನಿಲ್ದಾಣದ ಮೇಲೆ ನಡೆದ ಸಂಘಟಿತ ಭಯೋತ್ಪಾದಕ ದಾಳಿಯಲ್ಲಿ 31 ಮಂದಿ ಮೃತಪಟ್ಟಿದ್ದರು. ಇರಾಕ್‌ನ ಇಸ್ಲಾಮಿಕ್ ಸ್ಟೇಟ್ ಹಾಗೂ ಲೆವೆಂಟ್ ಗುಂಪುಗಳು ಈ ದಾಳಿಯ ಹೊಣೆ ಹೊತ್ತಿದ್ದವು.
ಮುಸ್ಲಿಮರು ಎಂದು ಹೇಳಿಕೊಳ್ಳುತ್ತಿರುವ ಇವರ ನಂಬಿಕೆ ಬಗ್ಗೆ ನಮಗೆ ಸಿಟ್ಟು ಹಾಗೂ ತಿರಸ್ಕಾರದ ಭಾವನೆ ಇದೆ ಎಂದು ಮುಸ್ಲಿಂ ಸ್ಕೂಲ್ ಅಸೋಸಿಯೇಶನ್‌ನ ಪ್ರಧಾನ ಕಾರ್ಯದರ್ಶಿ ಮಹ್ಮೂದ್ ಅಲ್ಲಾಪ್ ಪ್ರತಿಕ್ರಿಯಿಸಿದ್ದಾರೆ. ವಿಶ್ವದಲ್ಲಿ ಜನರ ಹತ್ಯೆಯನ್ನು ಪ್ರತಿಪಾದಿಸುವ ಯಾವ ಧರ್ಮವೂ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಈ ಜಿಮ್ ಶಿಕ್ಷಕಿಯ ವಿದ್ಯಾರ್ಥಿಗಳು ತಮ್ಮ ಭಾವನೆಗಳನ್ನು ಚಿತ್ರ, ಪದ್ಯ ಹಾಗೂ ಸಂದೇಶದ ರೂಪದಲ್ಲಿ ಅಭಿವ್ಯಕ್ತಪಡಿಸಲು ಅವಕಾಶ ಮಾಡಿಕೊಡಲಾಗಿತ್ತು. ಈ ಮೂಲಕ ನೆಚ್ಚಿನ ಶಿಕ್ಷಕಿಯನ್ನು ಕಳೆದುಕೊಂಡ ಆಘಾತದಿಂದ ಹೊರಬರಲು ಮಕ್ಕಳಿಗೆ ಸಾಧ್ಯವಾಗಲಿದೆ ಎಂಬ ನಿರೀಕ್ಷೆಯನ್ನು ಇತರ ಶಿಕ್ಷಕಿಯರು ವ್ಯಕ್ತಪಡಿಸಿದ್ದಾರೆ.
ಬ್ರಸೆಲ್ಸ್‌ನಾದ್ಯಂತ ಮಸೀದಿಗಳಲ್ಲಿ ಶುಕ್ರವಾರದ ಪ್ರಾರ್ಥನೆ ಬಳಿಕ ದಾಳಿಯದ್ದೇ ಚರ್ಚೆ ನಡೆಯುತ್ತಿತ್ತು. ದೇಶದಲ್ಲಿ ತಮ್ಮ ಭವಿಷ್ಯತ್ತಿನ ಸ್ಥಾನಮಾನದ ಬಗ್ಗೆ ಮುಸ್ಲಿಮರು ಆತಂಕಿತರಾಗಿದ್ದಾರೆ. ದಾಳಿ ಸಂತ್ರಸ್ತರಲ್ಲಿ ಅಮೆರಿಕ, ಇಂಗ್ಲೆಂಡ್, ಬಾರತ, ಮೊರಾಕ್ಕೊ, ಪೆರು ಹಾಗೂ ಚೀನಾದವರು ಸೇರಿದ್ದಾರೆ.





